×
Ad

ಮಹಾರಾಷ್ಟ್ರ:ರೈಲು ಬೋಗಿಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರ ಯತ್ನ

Update: 2016-12-08 14:45 IST
ಸಾಂದರ್ಭಿಕ ಚಿತ್ರ

ಕೊಲ್ಲಾಪುರ,ಡಿ.8: ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ನಿರ್ಧರಿಸುವಲ್ಲಿ ಸರಕಾರದ ವಿಳಂಬವನ್ನು ವಿರೋಧಿಸಿ ಪ್ರತಿಭಟನಾಕಾರರ ಗುಂಪೊಂದು ಇಲ್ಲಿಯ ರೈಲು ನಿಲ್ದಾಣದಲ್ಲಿ ಖಾಲಿ ಬೋಗಿಯೊಂದಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.

  ನಿನ್ನೆ ಮಹಾರಾಷ್ಟ್ರ ಎಕ್ಸಪ್ರೆಸ್ ರೈಲನ್ನು ಸ್ವಚ್ಛಗೊಳಿಸಲು ಪಿಟ್-ಲೈನ್‌ನಲ್ಲಿ ನಿಲ್ಲಿಸಲಾಗಿತ್ತು. ಸಂಜೆ ಏಳು ಗಂಟೆಯ ಸುಮಾರಿಗೆ ಘೋಷಣೆಗಳನ್ನು ಕೂಗುತ್ತಿದ್ದ ಮತ್ತು ಪ್ರತಿಭಟನೆಯ ಕರಪತ್ರಗಳನ್ನು ಎಸೆಯುತ್ತಿದ್ದ 10-15ಜನರ ಗುಂಪೊಂದು ಖಾಲಿ ಬೋಗಿಯೊಳಗೆ ಸೀಮೆಎಣ್ಣೆಯನ್ನು ಎರಚಿತ್ತು. ಗುಂಪು ಮೊದಲಿಗೆ ಬೋಗಿಯ ಸಮೀಪದಲ್ಲಿ ಬೆಳೆದಿದ್ದ ಹುಲ್ಲಿನ ರಾಶಿಗೆ ಬೆಂಕಿ ಹಚ್ಚಿತ್ತು. ನಿಲ್ದಾಣದಲ್ಲಿದ್ದ ಪ್ರಯಾಣಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಈ ವೇಳೆಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹಿರಿಯ ರೈಲ್ವೆ ಅಧಿಕಾರಿಗಳು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News