ಈಗ ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಕೊಡುಗೆ
ಹೊಸದಿಲ್ಲಿ,ಡಿ.8: ರಿಲಯನ್ಸ್ ಜಿಯೊ ತನ್ನ ಚಂದಾದಾರರಿಗೆ ಉಚಿತ ಕೊಡುಗೆಯನ್ನು ಮುಂದಿನ ವರ್ಷದ ಮಾರ್ಚ್ 31ರವರೆಗೆ ವಿಸ್ತರಿಸಿದ ಬೆನ್ನಿಗೇ ಪ್ರತಿಸ್ಪರ್ಧಿ ಏರ್‌ಟೆಲ್ ಇಂದು ಎರಡು ಹೊಸ ಪ್ರಿಪೇಡ್ ಪ್ಯಾಕ್‌ಗಳನ್ನು ಘೋಷಿಸಿದೆ. ಇದರೊಂದಿಗೆ ಚಂದಾದಾರರು ದೇಶಾದ್ಯಂತ ಎಲ್ಲಿಗೂ ಉಚಿತವಾಗಿ ಧ್ವನಿಕರೆಗಳನ್ನು ಮಾಡಬಹುದು, ಜೊತೆಗೆ ಉಚಿತ ಡಾಟಾ ಸೌಲಭ್ಯವನ್ನೂ ಪಡೆಯಬಹುದು. ಏರ್‌ಟೆಲ್ ದಿಲ್ಲಿ ವಲಯಕ್ಕೆ ತನ್ನ ನೂತನ ಪ್ಯಾಕ್ ದರಗಳನ್ನು ಪ್ರಕಟಿಸಿದ್ದು, ಬೇರೆ ವಲಯಗಳಿಗೆ ಈ ದರಗಳು ಬದಲಾಗಬಹುದು ಎಂದು ತಿಳಿಸಿದೆ.
345 ರೂ.ಗಳ ಏರಟೆಲ್‌ನ ಹೊಸ ಪ್ಯಾಕ್‌ನೊಂದಿಗೆ ಚಂದಾದಾರರು ಭಾರತದಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಧ್ವನಿಕರೆಗಳನ್ನು ಉಚಿತವಾಗಿ ಮಾಡಬಹುದು. ಇದರೊಂದಿಗೆ ಚಂದಾದಾರರಿಗೆ ಒಂದು ಜಿಬಿ 4ಜಿ ಡಾಟಾ ಕೂಡ ದೊರೆಯುತ್ತದೆ.ವೆಬ್ ಸರ್ಫಿಂಗ್ ಮತ್ತು ಲಘು ಸಾಮಾಜಿಕ ಮಾಧ್ಯಮ ಆ್ಯಪ್‌ಗಳನ್ನು ಸಂಪರ್ಕಿಸಲು ಸಮರ್ಥ ಬೇಸಿಕ್ ಮೊಬೈಲ್ ಫೋನ್‌ಗಳಿಗೆ ಹೆಚ್ಚುವರಿ 50 ಎಂಬಿ ಡಾಟಾ ದೊರೆಯುತ್ತದೆ.
145 ರೂ.ಗಳ ಇನ್ನೊಂದು ಹೊಸ ಪ್ಯಾಕ್ ಚಂದಾದಾರರಿಗೆ ಭಾರತದಾದ್ಯಂತ ಏರಟೆಲ್ ಬಳಕೆದಾರರಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಒದಗಿಸು ತ್ತದೆ. ಜೊತೆಗೆ 4ಜಿ ರೆಡಿ ಸ್ಮಾರ್ಟ್‌ಫೋನ್‌ಗಳಿಗೆ 300 ಎಂಬಿ ಡಾಟಾ ಮತ್ತು ಅಂತರ್ಜಾಲ ಸಂಪರ್ಕ ಸಾಧ್ಯವಿರುವ ಬೇಸಿಕ್ ಮೊಬೈಲ್ ಫೋನ್‌ಗಳಿಗೆ ಹೆಚ್ಚುವರಿಯಾಗಿ 50 ಎಂಬಿ ಡಾಟಾ ದೊರೆಯುತ್ತದೆ.
ಈ ಎರಡೂ ಹೊಸ ಪ್ಯಾಕ್‌ಗಳ ಅವಧಿ 28 ದಿನಗಳದ್ದಾಗಿರುತ್ತದೆ. ಕೇರಳದಲ್ಲಿ ಬಳಕೆದಾರರು 2ಜಿ/4ಜಿ ಡಾಟಾ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಏರ್‌ಟೆಲ್ ತಿಳಿಸಿದೆ.
ಇದೇ ವೇಳೆ ಏರ್‌ಸೆಲ್ ಕೂಡ ಮೂರು ತಿಂಗಳ ಅವಧಿಗೆ ಉಚಿತ ಧ್ವನಿಕರೆಗಳ ಹೊಸ ಪ್ರಿಪೇಡ್ ಪ್ಯಾಕ್‌ನ್ನು ಪ್ರಕಟಿಸಿದೆ.