ನಿಗೂಢ 'ಮುಂಬೈ ಡೈರಿ 'ಗಾಗಿ ಪರದಾಡುತ್ತಿರುವ ಐಟಿ ಅಧಿಕಾರಿಗಳು
ಅಹ್ಮದಾಬಾದ್,ಡಿ.8:ನಗರದ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ ಶಾ ಆದಾಯ ಬಹಿರಂಗ ಯೋಜನೆಯಡಿ 13,860 ಕೋ.ರೂ.ಗಳ ಕಪ್ಪುಹಣವನ್ನು ಘೋಷಿಸಿದ್ದ ಪ್ರಕರಣವೀಗ ನಿಗೂಢ 'ಮುಂಬೈ ಡೈರಿ' ಸುತ್ತ ಗಿರಕಿ ಹೊಡೆಯುತ್ತಿದೆ. ಶಾ ಈ ಡೈರಿಯ ನ್ನು ಉಲ್ಲೇಖಿಸುತ್ತಿದ್ದಾನಾದರೂ ಅದನ್ನು ಎಲ್ಲಿ ಪತ್ತೆ ಹಚ್ಚಬಹುದು ಎಂಬ ಬಗ್ಗೆ ಯಾವುದೇ ಖಚಿತವಾದ ಸುಳಿವುಗಳನ್ನು ನೀಡುತ್ತಿಲ್ಲ. ಹೀಗಾಗಿ ಶಾ ಹೇಳುವಂತೆ ತನ್ನ ಕಪ್ಪುಹಣ ಘೋಷಣೆಯ ಹಿಂದಿರುವ ವ್ಯಕ್ತಿಗಳ ಹೆಸರುಗಳಿರುವ ಆ ಡೈರಿಯನ್ನು ವಶಕ್ಕೆ ತೆಗೆದು ಕೊಳ್ಳಲು ಆದಾಯ ತೆರಿಗೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ತನ್ನನ್ನು ಮುಖವಾಡವನ್ನಾಗಿ ಮಾಡಿಕೊಂಡಿರುವವರಲ್ಲಿ ಹಲವಾರು ದೊಡ್ಡ ವ್ಯಕ್ತಿಗಳಿದ್ದಾರೆಂದು ಶಾ ತಿಳಿಸಿದ್ದಾನಾದರೂ ಆದಾಯ ತೆರಿಗೆ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯಲ್ಲಿ ಆತ ಈವರೆಗೂ ಈ ಹೆಸರುಗಳನ್ನು ಬಾಯಿಬಿಟ್ಟಿಲ್ಲ.
ಶಾಗೆ ಕಮಿಷನ್ ಮತ್ತು ಆತನ ಟ್ರಸ್ಟ್‌ಗಳ ಸ್ಥಾಪನೆಗೆ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರೆನ್ನಲಾದ ವ್ಯಕ್ತಿಗಳನ್ನು ಹೆಸರಿಸುವಂತೆ ಆದಾಯ ತೆರಿಗೆ ಅಧಿಕಾರಿಗಳು ಸೂಚಿಸಿದಾಗ,ಆ ವಿವರಗಳೆಲ್ಲ ಮುಂಬೈನಲ್ಲಿರುವ ಡೈರಿಯಲ್ಲಿ ಇವೆ ಎಂದು ಆತ ತಿಳಿಸಿದ್ದ. ಹೋಗಲಿ,ಅವರ ಸಂಪರ್ಕ ವಿವರಗಳನ್ನಾದರೂ ನೀಡು ಎಂದು ಕೇಳಿದರೆ ಅವೂ ಅದೇ ಡೈರಿಯಲ್ಲಿವೆ ಎಂದು ಶಾ ಉತ್ತರಿಸಿದ್ದಾನೆ.
ಶಾ ಠಾಣೆ ಸಮೀಪದ ಡೊಂಬಿವಲಿಯಲ್ಲಿ ತನ್ನ ಕಚೇರಿಗಳನ್ನು ಹೊಂದಿದ್ದು, ತನ್ನ ಅಕ್ರಮ ವಹಿವಾಟುಗಳ ದಾಖಲೆಗಳನ್ನು ಅಲ್ಲಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ. ಆದರೆ ಪ್ರಮುಖವಾದ ಡೈರಿಯನ್ನು ಪಡೆಯಲು ಆದಾಯ ತೆರಿಗೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಅಹ್ಮದಾಬಾದ್‌ನಲ್ಲಿರುವ ಶಾ ನಿವಾಸದಿಂದ ಒಂದು ಹಾರ್ಡ್ ಡಿಸ್ಕ್ ಮತ್ತು ಒಂದು ಡೈರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವರಾದರೂ ಅದರಲ್ಲಿಯ ಮಾಹಿತಿಗಳು ಪ್ರಕರಣವನ್ನು ಭೇದಿಸುವಲ್ಲಿ ನೆರವಾಗಿಲ್ಲ. ಹೀಗಾಗಿ ಮುಂಬೈ ಡೈರಿಯನ್ನು ಪತ್ತೆ ಹಚ್ಚುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪಾಲಿಗೆ ಭಾರೀ ತಲೆನೋವಾಗಿರುವ ಈ ಪ್ರಕರಣವನ್ನು ಭೇದಿಸಲು ನಿರ್ಣಾಯಕವಾಗಿದೆ.
ಗುಜರಾತ್,ಮುಂಬೈ,ಕರ್ನಾಟಕ ಮತ್ತು ಪುಣೆಯಲ್ಲಿ ತನ್ನ ಉದ್ಯಮಾಸಕ್ತಿಗಳನ್ನು ಹೊಂದಿರುವ ಶಾ ಆದಾಯ ಬಹಿರಂಗ ಯೋಜನೆಯ ಕೊನೆಯ ದಿನವಾಗಿದ್ದ ಸೆ.30ರಂದು ತನ್ನ ಬಳಿ 13,860 ಕೋ.ರೂ.ಕಪ್ಪುಹಣವಿದೆ ಎಂದು ಘೋಷಿಸಿದ್ದ.