ಕ್ಯಾಶ್ ಲೆಸ್ ವ್ಯವಹಾರ ಮಾಡುವವರಿಗೆ ಸರಕಾರದಿಂದ ಶುಭ ಸುದ್ದಿ
ಹೊಸದಿಲ್ಲಿ,ಡಿ.8: ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯ ನಿರ್ಧಾರವನ್ನು ಪ್ರಕಟಿಸಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಆರ್ಥಿಕತೆಯಲ್ಲಿ ಪ್ರಮುಖ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಇಲ್ಲಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗದು ಹಣದ ವಹಿವಾಟು ಕಡಿಮೆ ಇರುವಂತೆ ಮಾಡಲು ಸರಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ನಗದು ಹಣದ ವಹಿವಾಟು ಆರ್ಥಿಕತೆಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಪ್ರತಿಪಾದಿಸಿದ ಅವರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಇ-ವ್ಯಾಲೆಟ್‌ಗಳ ಮೂಲಕ ಹಣಪಾವತಿಯನ್ನು ಸರಕಾರವು ಉತ್ತೇಜಿಸುತ್ತಿದೆ ಎಂದರು. ಡಿಜಿಟಲ್ ವಹಿವಾಟುಗಳಿಗೆ ಹಲವಾರು ರಿಯಾಯಿತಿಗಳನ್ನು ಅವರು ಪ್ರಕಟಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಡಿಜಿಟಲ್ ರೂಪದಲ್ಲಿ ಹಣ ಪಾವತಿಸಿದರೆ ಶೇ.0.75 ರಿಯಾಯಿತಿಯನ್ನು ನೀಡಲಾಗುವುದು. ಈ ರಿಯಾಯಿತಿ ಡಿಜಿಟಲ್ ಪಾವತಿಯ ಮೂಲಕ ಮಾಸಿಕ ಪಾಸ್‌ಗಳನ್ನು ಖರೀದಿಸುವ ಸಬರ್ಬನ್ ರೈಲು ಪ್ರಯಾಣಿಕರಿಗೂ ದೊರೆಯಲಿದೆ. ಇದು ಮುಂಬೈ ಲೋಕಲ್ ರೈಲುಗಳಿಂದ ಮೊದಲ್ಗೊಂಡು 2017,ಜ.1ರಿಂದ ಜಾರಿಯಾಗಲಿದೆ. ಪ್ರಯಾಣಿಕರು ಡಿಜಿಟಲ್ ಹಣ ಪಾವತಿಯ ಮೂಲಕ ರೈಲು ಟಿಕೆಟ್‌ಗಳನ್ನು ಖರೀದಿಸಿದರೆ 10 ಲಕ್ಷ ರೂ.ಗಳ ವಿಮೆ ರಕ್ಷಣೆ ದೊರೆಯಲಿದೆ. ಕೇಟರಿಂಗ್,ವಿಶ್ರಾಂತಿ ಕೋಣೆಗಳಂತಹ ರೈಲ್ವೆ ಸೌಲಭ್ಯಗಳಿಗೆ ಡಿಜಿಟಲ್ ಪಾವತಿ ಮೇಲೆ ಶೇ.5 ರಿಯಾಯಿತಿಯನ್ನು ನೀಡಲಾಗುವುದು. ಕಿಸಾನ್ ಕ್ರೆಡಿಟ್ ಕಾಡ್ ಹೊಂದಿದವರಿಗೆ ರುಪೇ ಕಾರ್ಡ್‌ಗಳನ್ನು ನಬಾರ್ಡ್ ವಿತರಿಸಲಿದೆ ಎಂದು ತಿಳಿಸಿದ ಜೇಟ್ಲಿ, ಆರ್‌ಬಿಐ ನಿಗದಿತ ಕಾರ್ಯಸೂಚಿಯಂತೆ ಕರೆನ್ಸಿ ನೋಟುಗಳನ್ನು ಬಿಡುಗಡೆಗೊಳಿಸುತ್ತಿದೆ. ಡಿಜಿಟಲ್ ವಹಿವಾಟಿನತ್ತ ಸಾಗುವುದು ನೋಟು ಅಮಾನ್ಯ ಕ್ರಮದ ಉದ್ದೇಶವಾಗಿದೆ ಎಂದರು.