ಹಣದ ನಿರ್ಬಂಧ ವಿಯೆನ್ನಾ ಒಪ್ಪಂದದ ಉಲ್ಲಂಘನೆ
ಹೊಸದಿಲ್ಲಿ, ಡಿ.8: ಹಣ ವಾಪಸು ಪಡೆಯಲು ರಾಯಭಾರಿಗಳಿಗೆ ವಿಧಿಸಲಾಗಿರುವ ನಿರ್ಬಂಧದ ಕುರಿತು ಹಲವು ವಿದೇಶೀಯ ಸರಕಾರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಹಣದ ನಿರ್ಬಂಧ ವಿಯೆನ್ನಾ ಒಪ್ಪಂದದ ತೀವ್ರ ಉಲ್ಲಂಘನೆಯಾಗಿದ್ದು ಇದಕ್ಕೆ ಪ್ರತಿಯಾಗಿ ವಿದೇಶದಲ್ಲಿರುವ ಭಾರತೀಯ ದೂತಾವಾಸದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿವೆ. ಈ ವಿಷಯದ ಬಗ್ಗೆ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿರುವ ಡಿಪ್ಲೊಮ್ಯಾಟಿಕ್ ಕಾರ್ಪ್ಸ್‌ನ ಡೀನ್ ಆಗಿರುವ ಫ್ರಾಂಕ್ ಹ್ಯಾನ್ಸ್ ಡ್ಯಾನೆನ್‌ಬರ್ಗ್ ಕ್ಯಾಸ್ಟೆಲನೋಸ್, ಇದೀಗ ‘ಮೊಲ’ ಪ್ರಧಾನಿ ನರೇಂದ್ರ ಮೋದಿಯವರ ಮನೆ ಬಾಗಿಲಿನಲ್ಲಿದೆ. ಆದ್ದರಿಂದ ಅವರು ತಕ್ಷಣ ಮಧ್ಯಪ್ರವೇಶಿಸಿ ತಕ್ಷಣ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಡಿಪ್ಲೊಮ್ಯಾಟಿಕ್ ಕಾರ್ಪ್ಸ್ ಎಂಬುದು ದೇಶದಲ್ಲಿರುವ 157 ವಿದೇಶೀ ದೂತಾವಾಸ ಸಿಬ್ಬಂಯ ಪ್ರತಿನಿಧಿಯಾಗಿದೆ. ಎಲ್ಲಾ ಸರಕಾರಗಳೂ ಪ್ರತಿಕ್ರಮ ಕೈಗೊಳ್ಳಬಹುದು ಎಂದು ನಾನು ಹೇಳುತ್ತಿಲ್ಲ. ಆದರೆ ಕೆಲವು ದೇಶಗಳಾದರೂ ಈ ನಿಟ್ಟಿನಲ್ಲಿ ಯೋಚಿಸುತ್ತಿರುವ ಸಾಧ್ಯತೆಗಳಿವೆ ಎಂದು ಡೊಮಿನಿಕನ್ ಗಣರಾಜ್ಯದ ರಾಯಭಾರಿಯಾಗಿರುವ ಕ್ಯಾಸ್ಟೆಲನೋಸ್ ಹೇಳಿದರು. ಹಣ ಹಿಂಪಡೆಯುವ ಬಗೆಗಿನ ನಿರ್ಬಂಧದ ಕುರಿತು ಈಗಾಗಲೇ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಶಿಷ್ಟಾಚಾರ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ ಎಂದವರು ತಿಳಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿ ಮತ್ತು ವಿದೇಶೀಯ ರಾಷ್ಟ್ರಗಳು ಪ್ರತಿಕ್ರಮ ಕೈಗೊಳ್ಳುವ ಪರಿಸ್ಥಿತಿ ಬಾರದಿರಲಿ ಎಂದು ಅವರು ಆಶಿಸಿದರು.