×
Ad

ಹತಾಶೆಯಿಂದ ಮಹಿಳೆ ಬೆಂಕಿ ಹಚ್ಚಿ ಆತ್ಮಹತ್ಯೆ

Update: 2016-12-08 23:56 IST

ಲಕ್ನೊ, ಡಿ.8: ತನ್ನಲ್ಲಿದ್ದ ಆರು ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿ ಕೊಳ್ಳಲು ಬ್ಯಾಂಕ್‌ನೆದುರು ಮೂರು ದಿನ ಸರತಿ ಸಾಲಿನಲ್ಲಿ ನಿಂತರೂ ಫಲ ನೀಡದ ಕಾರಣ ಹತಾಶೆಯಿಂದ ನ.22ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೋರ್ವರು ದಿಲ್ಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಇವರ ಕುಟುಂಬಕ್ಕೆ ಉತ್ತರ ಪ್ರದೇಶ ಸರಕಾರವು 5 ಲಕ್ಷ ಪರಿಹಾರ ಧನ ಘೋಷಿಸಿದೆ. ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿ ನಡೆದ ಪ್ರಕ್ರಿಯೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಧನ ಮಂಜೂರುಗೊಳಿಸಿರುವ ಪ್ರಪ್ರಥಮ ಪ್ರಕರಣ ಇದಾಗಿದೆ. ನಾಲ್ಕು ಮಕ್ಕಳ ತಾಯಿ ರಝಿಯಾ (35 ವರ್ಷ) ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಮಹಿಳೆ. ಈಕೆಯ ಪತಿ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ರಝಿಯಾ ದಿನಗೂಲಿ ಮಾಡಿಕೊಂಡಿದ್ದಳು. ನೋಟು ಅಮಾನ್ಯಗೊಳಿಸಿದ ಬಳಿಕ ಈಕೆ 500 ರೂ.ನ ಆರು ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಎದುರು ಕ್ಯೂ ನಿಂತಿದ್ದಳು. ಇದು ಆಕೆಯ ಗಂಡನ 15 ದಿನಗಳ ಸಂಪಾದನೆಯಾಗಿತ್ತು. ಮೂರು ದಿನ ಈಕೆ ಸರದಿ ಸಾಲಿನಲ್ಲಿ ನಿಂತು ಬಸವಳಿದಿದ್ದಳು. ಇನ್ನೇನು ಬ್ಯಾಂಕ್ ನೊಳಗೆ ಪ್ರವೇಶಾವಕಾಶ ಸಿಕ್ಕಿತು ಎನ್ನುವಷ್ಟರಲ್ಲಿ ಬ್ಯಾಂಕ್‌ನಲ್ಲಿ ಹಣ ಖಾಲಿಯಾಗುತ್ತಿತ್ತು. ನ.22ರಂದು ಸರದಿ ಸಾಲಿನಲ್ಲಿ ನಿಂತರೂ ಹಣ ಪಡೆಯಲಾಗದ ಹತಾಶೆಯಲ್ಲಿ ರಝಿಯಾ ಮನೆಗೆ ಮರಳಿದ್ದಳು. ಆದರೆ ಮನೆಯಲ್ಲಿ ದಿನಸಿ ಸಾಮಗ್ರಿ ಕೊಳ್ಳಲೂ ಹಣ ಇರಲಿಲ್ಲ. ಹಸಿವಿನಿಂದ ಕಂಗಾಲಾಗಿದ್ದ ಆಕೆಯ ನಾಲ್ವರು ಮಕ್ಕಳು, ತಿನಿಸು ಬೇಕೆಂದು ಅಳತೊಡಗಿದಾಗ ರಝಿಯಾ ಬೇಸತ್ತುಹೋದಳು. ಒಂದೆಡೆ ನೋಟು ಬದಲಾಯಿಸಲು ಆಗದ ಅಸಹಾಯಕತೆ, ಇನ್ನೊಂದೆಡೆ ಮಕ್ಕಳ ಹಸಿವೆ ನೀಗಿಸಲಾಗದ ಸಂಕಟದಿಂದ ನೊಂದ ರಝಿಯಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಆಕೆಯ ಪತಿ ಅಕ್ಬರ್ ತಿಳಿಸಿದ್ದಾರೆ.

 ಗಂಭೀರ ಗಾಯಗೊಂಡ ಈಕೆಯನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ರವಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮಗಳ ಸಾವಿನಿಂದ ಕಂಗೆಟ್ಟಿರುವ ರಝಿಯಾಳ ತಾಯಿ ರೈಝಾ, ಈ ಪುಟ್ಟ ಮಕ್ಕಳಿಗೆ ಇನ್ಯಾರು ಗತಿ.. ನಮಗ್ಯಾಕೆ ಈ ಸಂಕಷ್ಟ. ಇಂತಹ ಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಅಳುತ್ತಾ, ಪುಟ್ಟ ಮಕ್ಕಳನ್ನು ಸಂತೈಸುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಅಲ್ಲದೆ ನೋಟಿಗಾಗಿ ಕ್ಯೂನಲ್ಲಿ ನಿಂತ ಸಂದರ್ಭ ಬ್ಯಾಂಕ್ ಅಥವಾ ಎಟಿಎಂಳ ಹೊರಗೆ ಸಾವನ್ನಪ್ಪಿದವರ ಕುಟುಂಬದವರಿಗೆ ರಾಜ್ಯ ಸರಕಾರ 2 ಲಕ್ಷ ಪರಿಹಾರ ಧನ ನೀಡುತ್ತದೆ ಎಂದು ತಿಳಿಸಿದ್ದಾರೆ. ನೋಟು ಅಮಾನ್ಯಗೊಳಿಸಿದ ಬಳಿಕ ದೇಶದಾದ್ಯಂತ ನಡೆದ ಸಾವು ನೋವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವೇ ಹೊಣೆಯಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News