ಗಾಯಕಿಯೂ ಆಗಿದ್ದ ನಾಯಕಿ ಜಯಲಲಿತಾ

Update: 2016-12-09 13:42 GMT

ಜಯಲಲಿತಾ ಉತ್ತಮ ಗಾಯಕಿಯಾಗಿದ್ದರು ಕೂಡಾ. ಸುಮಾರು 14ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಇವರು ಹಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಬಲಿಷ್ಠ ಶಕ್ತಿಯಾಗಿ ಬೆಳೆ ದರೂ ತಾನು ಸಾಗಿ ಬಂದ ಸಿನೆಮಾ ದಾರಿಯನ್ನು ಇವರು ಮರೆಯಲಿಲ್ಲ. ತಮಿಳು ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯನ್ನಾಗಿ ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ್ ಅವರನ್ನು ನೇಮಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ.. ಹೀಗೆ ಸುಮಾರು 100ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಜಯಲಲಿತಾ ಉತ್ತಮ ಗಾಯಕಿ ಕೂಡಾ ಆಗಿದ್ದರು. ಸುಮಾರು 14 ಸಿನೆಮಾಗಳಲ್ಲಿ ಇವರು ಹಾಡಿದ್ದಾರೆ. ಜೊತೆಗೆ ಖ್ಯಾತ ವಯಲಿನ್ ವಾದಕ ಕುನ್ನಕ್ಕುಡಿ ವೈದ್ಯನಾಥನ್ ಅವರ ಸಂಗೀತ ಸಂಯೋಜನೆಯಲ್ಲಿ ಜಯಲಲಿತಾ ಹಾಡಿರುವ ಮೂರು ಭಕ್ತಿಗೀತೆಗಳ ಆಲ್ಬಂ ಕೂಡಾ ಸಾಕಷ್ಟು ಜನಪ್ರಿಯವಾಗಿದೆ

ಅವಕಾಶ ಎಲ್ಲರನ್ನೂ ಹುಡುಕಿಕೊಂಡು ಬರುತ್ತದೆ. ಕೆಲವರು ಅದನ್ನು ಎರಡು ಕೈಯಲ್ಲೂ ಬಾಚಿಕೊಳ್ಳುತ್ತಾರೆ, ಆದರೆ ಕೆಲವರು ಈ ವೇಳೆ ಬಾಗಿಲು ಮುಚ್ಚಿರುತ್ತಾರೆ ಎಂಬ ಮಾತಿದೆ.ಮೊನ್ನೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಗ್ಗೆ ಹೇಳುವುದಾದರೆ ಈ ಮಾತು ನೂರಕ್ಕೆ ನೂರು ಸತ್ಯ

ಮೊದಲು ಸಿನೆಮಾ ನಟಿಯಾಗಿ ಖ್ಯಾತಿಯ ಉತ್ತುಂಗಕ್ಕೇರಿದವರು ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿ ಗುರುವನ್ನೂ ಮೀರಿಸಿದ ಶಿಷ್ಯೆಯಾಗಿ ಬೆಳೆದಿದ್ದು ಈಗ ಇತಿಹಾಸ. ತಮಿಳಿನಲ್ಲಿ ಸುಮಾರು 90ರಷ್ಟು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಜಯಲಲಿತಾ ರ ಸಿನೆಮಾ ಜೀವನ ಆರಂಭವಾದದ್ದು ಕನ್ನಡದಲ್ಲಿ. 1961ರಲ್ಲಿ ಖ್ಯಾತ ಸಿನೆಮಾ ನಿರ್ದೇಶಕ ಆರೂರು ಪಟ್ಟಾಭಿಯವರು ತಮ್ಮ ಮಹತ್ವಾಕಾಂಕ್ಷೆಯ ಸಿನೆಮಾ ‘ಶ್ರೀಶೈಲ ಮಹಾತ್ಮೆ’ ಯ ಚಿತ್ರೀಕರಣವನ್ನು ಸ್ಟುಡಿಯೋ ಒಂದರಲ್ಲಿ ನಡೆಸುತ್ತಿದ್ದರು. ಆ ಕಾಲದ ಪ್ರಸಿದ್ಧ ನಟಿ ಸಂಧ್ಯಾರವರು ನಟಿಸುತ್ತಿದ್ದ ಸಿನೆಮಾದ ಚಿತ್ರೀಕರಣವೂ ಇದೇ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸಂಧ್ಯಾ ತನ್ನ ಮಗಳನ್ನೂ ಜೊತೆಗೆ ಕರೆ ತಂದಿದ್ದರು.

ಶ್ರೀಶೈಲ ಮಹಾತ್ಮೆ ಸಿನೆಮಾದಲ್ಲಿ ಶಾಲೆಯಲ್ಲಿ ಮಕ್ಕಳು ನಾಟಕ ಆಡುವ ದೃಶ್ಯದ ಚಿತ್ರೀಕರಣ ನಡೆಯಬೇಕಿತ್ತು. ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಪಾರ್ವತಿಯಾಗಿ ನಟಿಸಬೇಕಿದ್ದ ಹುಡುಗಿಯ ಪತ್ತೆಯೇ ಇಲ್ಲ. ಏನು ಮಾಡುವುದೆಂದು ತಿಳಿಯದೆ ಎಲ್ಲರೂ ಗಲಿಬಿಲಿಗೊಂಡರು. ಈ ವೇಳೆ ಸಿನೆಮಾ ಶೂಟಿಂಗ್ ಸಿದ್ಧತೆಯನ್ನು ಬೆರಗುಗಣ್ಣುಗಳಿಂದ ವೀಕ್ಷಿಸುತ್ತಿದ್ದ ಬಾಲಕಿಯನ್ನು ನಿರ್ಮಾಪಕ ನೀರ್ಲಹಳ್ಳಿ ಥಳಿಕೇರಪ್ಪ ಮತ್ತು ನಿರ್ದೇಶಕ ಪಟ್ಟಾಭಿ ಗಮನಿಸಿದರು. ಸಂಧ್ಯಾರ ಮನವೊಲಿಸಿ ಆ ಬಾಲಕಿಗೆ ಪಾರ್ವತಿಯ ದಿರಿಸು ತೊಡಿಸಲಾಯಿತು. ನಾಟಕದ ದೃಶ್ಯದ ಚಿತ್ರೀಕರಣ ಸುಸೂತ್ರವಾಗಿ ಸಾಗಿತು. ಈ ‘ಪಾರ್ವತಿ’ ಮುಂದೊಂದು ದಿನ ಭಾರತದ ಸಿನೆಮಾ ರಂಗ ಮತ್ತು ರಾಜಕೀಯ ರಂಗ ಎರಡರಲ್ಲೂ ಇತಿಹಾಸ ಬರೆಯುತ್ತಾಳೆ ಎಂದು ಆಗ ಯಾರೂ ಊಹಿಸಿರಲಿಲ್ಲ. ಹೀಗೆ ದೊರೆತ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಈ ಬಾಲಕಿಯೇ ಜಯಲಲಿತಾ. ತಮಿಳು ಸಿನೆಮಾರಂಗ ಮತ್ತು ರಾಜಕೀಯ ರಂಗ ಎರಡರಲ್ಲೂ ತನ್ನದೇ ಆದ ಛಾಪು ಮೂಡಿಸಿದ ಜಯಲಲಿತಾ, ತನ್ನ ಸಿನೆಮಾಕ್ಷೇತ್ರದ ಪಯಣ ಆರಂಭಿಸಿದ್ದು ಕನ್ನಡ ಸಿನೆಮಾದ ಮೂಲಕ. ಡಾ. ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಮತ್ತು ಕಲ್ಯಾಣ್ ಕುಮಾರ್ ಮುಂತಾದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು ಜಯಲಲಿತಾ ಎನ್ನುತ್ತಾರೆ ಸಿನೆಮಾ ಇತಿಾಸಕಾರ ಎನ್.ಎಸ್. ಶ್ರೀಧರಮೂರ್ತಿ.

1961ರಿಂದ 65ರವರೆಗೆ ಆರು ಕನ್ನಡ ಸಿನೆಮಾಗಳಲ್ಲಿ ಜಯಲಲಿತಾ ನಟಿಸಿದ್ದರು. ಶ್ರೀಶೈಲ ಮಹಾತ್ಮೆ ಸಿನೆಮಾದಲ್ಲಿ ರಾಜಕುಮಾರ್ ಮತ್ತು ಬಾಲಕೃಷ್ಣ ನಟಿಸಿದ್ದರು. ಇದರಲ್ಲಿ ಒಂದು ಹಾಡಿಗೆ ನೃತ್ಯ ಮಾಡುವ ಮೂಲಕ ಜಯಲಲಿತಾ ಸಿನೆಮಾ ಪಯಣ ಆರಂಭವಾಗಿತ್ತು. ಈಕೆ ನಾಯಕಿಯಾಗಿ ನಟಿಸಿದ ಮೊದಲ ಕನ್ನಡ ಸಿನೆಮಾ ಚಿನ್ನದ ಗೊಂಬೆ. 1964ರಲ್ಲಿ ತೆರೆಕಂಡ ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಬಿ.ಆರ್.ಪಂತುಲು ನಿರ್ಮಿಸಿ ನಿರ್ದೇಶಿಸಿದ್ದರು. ಎಂ.ವಿ.ರಾಜಮ್ಮ, ಸಂಧ್ಯಾ(ಜಯಲಲಿತಾರ ತಾಯಿ) ಮತ್ತು ಕಲ್ಪನಾ ಕೂಡಾ ಪ್ರಧಾನ ಪಾತ್ರ ವಹಿಸಿದ್ದರು. ಈ ಸಿನೆಮಾವನ್ನು ಬಳಿಕ ತಮಿಳಿನಲ್ಲಿ ‘ಮುರದನ್ ಮುತ್ತು’ , ಹಿಂದಿಯಲ್ಲಿ ‘ಗೋಪಿ’ ಮತ್ತು ತೆಲುಗಿನಲ್ಲಿ ‘ ಪಲ್ಲೆತೂರಿ ಚಿನ್ನೊಡು’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.

ಜಯಲಲಿತಾ ನಾಯಕಿಯಾಗಿ ನಟಿಸಿದ ಮತ್ತೊಂದು ಕನ್ನಡ ಸಿನೆಮಾ ‘ಮಾವನ ಮಗಳು’. ಕಲ್ಯಾಣ್ ಕುಮಾರ್ ಮತ್ತು ಅಶ್ವಥ್ ಪ್ರಧಾನ ಭೂಮಿಕೆಯಲ್ಲಿದ್ದ ಈ ಸಿನೆಮಾವನ್ನು ಎಸ್.ಕೆ. ಅನಂತಾಚಾರಿ ನಿರ್ದೇಶಿಸಿದ್ದರು. ‘ಮನೆ ಅಳಿಯ’ ಸಿನೆಮಾದಲ್ಲಿ ಜಯಲಲಿತಾ ಜೊತೆ ಕಲ್ಯಾಣ್ ಕುಮಾರ್ ುತ್ತು ನರಸಿಂಹರಾಜು ನಟಿಸಿದ್ದರು.

1965ರಲ್ಲಿ ವೇದಾಂತಂ ರಾಘವಯ್ಯ ನಿರ್ದೇಶನದ ‘ ನನ್ನ ಕರ್ತವ್ಯ’ ಮತ್ತು ‘ಬದುಕುವ ದಾರಿ’ ಸಿನೆಮಾದಲ್ಲಿ ನಟಿಸಿದ್ದರು. ಕನ್ನಡ ಸಿನೆಮಾ ರಂಗದ ಆರಂಭದ ಕಾಲದಿಂದಲೂ ಅದರ ಜೊತೆ ನಂಟು ಹೊಂದಿದ್ದ, ಕನ್ನಡ ಸಿನೆಮಾ ರಂಗದ ಏಳುಬೀಳುಗಳನ್ನು ಕಂಡಿರುವ ಹಿರಿಯ ೆಟೊಗ್ರಾರ್ ಚಿಕ್ಕಬಳ್ಳಾಪುರದ ಭವಾನಿ ಲಕ್ಷ್ಮೀನಾರಾಯಣ ಅವರು ಜಯಲಲಿತಾ ಕನ್ನಡದಲ್ಲಿ ನಟಿಸಿದ್ದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ಮಾವನ ಮಗಳು ಸಿನೆಮಾಕ್ಕಾಗಿ ನಂದಿ ಬೆಟ್ಟದಲ್ಲಿ ಹೊರಾಂಗಣ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಮಂದ ಬೆಳಕಿದ್ದ ಕಾರಣ ಸ್ವಲ್ಪ ಹೊತ್ತು ಕಾಯುವಂತೆ ನಾನು ನಾಯಕ ನಟಿ ಜಯಲಲಿತಾರಿಗೆ ತಿಳಿಸಿದೆ. ಅವರು ಮರು ಮಾತಿಲ್ಲದೆ ಒಪ್ಪಿಕೊಂಡರು ಎಂದು ನೆನಪಿಸಿಕೊಳ್ಳುತ್ತಾರೆ.

ಜಯಲಲಿತಾರ ತಾಯಿ ಸಂಧ್ಯಾರಿಗೆ ಲಕ್ಷ್ಮೀನಾರಾಯಣ ಚಿರಪರಿಚಿತರಾಗಿದ್ದರು. ತನ್ನ ಮಗಳನ್ನು ಕನ್ನಡ ಸಿನೆಮಾ ರಂಗದಲ್ಲಿ ಬೆಳೆಯಲು ಪ್ರೋತ್ಸಾಹಿಸುವಂತೆ ಸಂಧ್ಯಾ ಕೇಳಿಕೊಂಡಿದ್ದರು. ಮದ್ರಾಸಿಗೆ ಹೋಗಿದ್ದಾಗ ಸಂಧ್ಯಾರನ್ನು ಭೇಟಿಯಾಗಿದ್ದೆ. ಆಗ ತನ್ನ ಮಗಳ ೆಟೊಶೂಟ್ ಮಾಡುವಂತೆ ಸಂಧ್ಯಾ ಕೇಳಿಕೊಂಡಿದ್ದರು ಎನ್ನುತ್ತಾರವರು. ಆ ಸಂದರ್ಭದಲ್ಲಿ ಕನ್ನಡದ ಬಹುತೇಕ ಸಿನೆಮಾ ಮ್ಯಾಗಝಿನ್‌ಗಳಲ್ಲಿ ನಿಯಮಿತವಾಗಿ ಜಯಲಲಿತಾರ ೆಟೊ ಪ್ರಕಟವಾಗಲು ಲಕ್ಷ್ಮೀನಾರಾಯಣ ಕಾರಣರಾಗಿದ್ದರು. ಜಯಲಲಿತಾ ಮದ್ರಾಸ್‌ನಲ್ಲಿ ‘ಸೆಟ್ಲ್’ ಆದ ಮೇಲೂ ಲಕ್ಷ್ಮೀನಾರಾಯಣ ಅವರನ್ನು ಕೆಲ ಬಾರಿ ಭೇಟಿಯಾಗಿದ್ದರು. ಆದರಾತಿಥ್ಯ ಗುಣವನ್ನು ಆಕೆ ಮರೆತಿರಲಿಲ್ಲ. ಬೆಂಗಳೂರಿನಲ್ಲಿದ್ದಾಗ ನನ್ನ ಜೊತೆ ಯಾವ ರೀತಿ ಆತ್ಮೀಯಳಾಗಿದ್ದಳೋ ಅದೇ ಆತ್ಮೀಯತೆ ಆಗಲೂ ಅವಳಲ್ಲಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಇದೀಗ 83ರ ಹರೆಯದಲ್ಲಿರುವ ಲಕ್ಷ್ಮೀನಾರಾಯಣ.

ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿ ಆದ ಬಳಿಕವೂ ಅವಳನ್ನು ಭೇಟಿಯಾಗಲು ಯತ್ನಿಸಿದ್ದೆ. ಆದರೆ ನಾನು ಅವಳ ಮನೆಗೆ ಭೇಟಿ ನೀಡಿದಾಗಲೆಲ್ಲಾ ಆಕೆ ಪ್ರವಾಸದಲ್ಲಿದ್ದ ಕಾರಣ ಭೇಟಿಯಾಗಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಜಯಲಲಿತಾ ಸ್ವಲ್ಪ ಸಂಕೋಚ ಸ್ವಭಾವದವಳು. ಬುದ್ಧಿವಂತೆ. ಸಾಕಷ್ಟು ಓದುತ್ತಿದ್ದಳು. ಚಿತ್ರೀಕರಣಕ್ಕೆ ಹೋಗುವಾಗಲೆಲ್ಲಾ ಇಂಗ್ಲಿಷ್ ಪುಸ್ತಕಗಳನ್ನು ಜತೆಗೊಯ್ಯುತ್ತಿದ್ದಳು. ಭರತನಾಟ್ಯ ನೃತ್ಯ ಪ್ರವೀಣೆಯಾಗಿದ್ದಳು. ಮೇಕ್‌ಅಪ್ ಇಲ್ಲದೆ ೆಟೊ ತೆಗೆಸಿಕೊಳ್ಳಲು ನಿರಾಕರಿಸುತ್ತಿದ್ದಳು. ತನ್ನ ಸೌಂದರ್ಯವನ್ನು ಕಾಯ್ದುಕೊಳ್ಳುವ ಬಗ್ಗೆ ಜಾಗರೂಕಳಾಗಿದ್ದಳು ಎನ್ನುವ ಲಕ್ಷ್ಮೀನಾರಾಯಣರ ಬಳಿ ಸಂಧ್ಯಾ ಮತ್ತು ಜಯಲಲಿತಾ ಇಬ್ಬರೂ ಬರೆದಿರುವ ಪತ್ರಗಳಿವೆ.

ಇನ್ನೊಬ್ಬ ಖ್ಯಾತ ಸಿನೆಮಾ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಈ ಹಿಂದೊಮ್ಮೆ ಸಿನೆಮಾ ಚಿತ್ರೀಕರಣದ ಸಂದರ್ಭ ಜಯಲಲಿತಾರನ್ನು ಹೊಟೇಲ್‌ನಿಂದ ಶೂಟಿಂಗ್ ಸ್ಥಳಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಆ ಸಂದರ್ಭ ಜಯಲಲಿತಾ ದಕ್ಷಿಣ ಭಾರತೀಯ ಸಿನೆಮಾ ರಂಗದ ಬಗ್ಗೆ ಹಲವಾರು ವಿಷಯಗಳನ್ನು ತನ್ನೊಡನೆ ಹಂಚಿಕೊಂಡಿ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಹೀಗೆ ಕನ್ನಡದಲ್ಲಿ ಸಿನೆಮಾ ಪ್ರಯಾಣ ಆರಂಭಿಸಿದ್ದ ಜಯಲಲಿತಾರಿಗೆ ಕನ್ನಡ ಭಾಷೆ ಅರ್ಥವಾಗುತ್ತಿತ್ತು. ಆದರೆ ನಿರರ್ಗಳವಾಗಿ ಮಾತನಾಡಲು ಆಗುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News