×
Ad

ನೋಟು ರದ್ದತಿ ಮಹಾ ದುರಂತ: ಮನಮೋಹನ್

Update: 2016-12-09 19:43 IST

ಹೊಸದಿಲ್ಲಿ, ಡಿ.9: ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ನಿರ್ಧಾರವು ‘ಅವರ ಮೂಲಭೂತ ಕರ್ತವ್ಯದ ಅಪಹಾಸ್ಯವಾಗಿದೆ’ ಹಾಗೂ ಒಂದು ಶತಕೋಟಿಗೂ ಹೆಚ್ಚಿನ ಭಾರತೀಯರ ವಿಶ್ವಾಸವನ್ನು ನಾಶಗೊಳಿಸಿದೆಯೆಂದು ಮೋದಿಯವರ ಪೂರ್ವಾಧಿಕಾರಿ ಮನಮೋಹನ ಸಿಂಗ್ ಟೀಕಿಸಿದ್ದಾರೆ.ಇಂದಿನ ‘ದಿ ಹಿಂದೂ’ ಪತ್ರಿಕೆಯಲ್ಲಿ ಈ ತೀಕ್ಷ್ಣ ಟೀಕೆ ಪ್ರಕಟವಾಗಿದೆ.

‘ಮೇಕಿಂಗ್ ಆಫ್ ಎ ಮಾಮತ್ ಟ್ರಾಜಡಿ’ ಎಂಬ ಸಂಪಾದಕೀಯದಲ್ಲಿ ಸಿಂಗ್, ಜಿಡಿಪಿ ಹಾಗೂ ಉದ್ಯೋಗ ಸೃಷ್ಟಿಯ ಮೇಲೆ ಅತ್ಯಲ್ಪ ಪರಿಣಾಮ ಹಾಗೂ ಮುಂದಿನ ತಿಂಗಳುಗಳಲ್ಲಿ ಅನಗತ್ಯ ಕಠಿಣ ದಿನಗಳ ಭವಿಷ್ಯ ನುಡಿದಿದ್ದಾರೆ. ನೋಟು ರದ್ದತಿ ನಿರ್ಧಾರವು ಪ್ರಾಮಾಣಿಕ ಭಾರತೀಯನಿಗೆ ಆಳವಾದ ಗಾಯ ಮಾಡಲಿದೆ ಹಾಗೂ ಅಪ್ರಾಮಾಣಿಕ ಕಪ್ಪುಕುಳಗಳು ಬೆರಳಗಿಣ್ಣಿಗೆ ಕೇವಲ ಸಣ್ಣ ಗಾಯದೊಂದಿಗೆ ಪಾರಾಗಲಿದ್ದಾರೆಂದು ಹೇಳಿದ್ದಾರೆ.

ಭಾರತ ಸರಕಾರ ತಮ್ಮನ್ನು ಹಾಗೂ ತಮ್ಮ ಹಣವನ್ನು ರಕ್ಷಿಸುವುದೆಂದು ಕೋಟ್ಯಂತರ ಜನರು ಇರಿಸಿದ್ದ ನಂಬಿಕೆ ಹಾಗೂ ಭರವಸೆಯನ್ನು ಪ್ರಧಾನಿಯ ಒಂದು ಅವಸರದ ನಿರ್ಧಾರವು ನಾಶಗೊಳಿಸಿದೆ. ಅದರಿಂದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವಾಗಲಿದೆ. ಬಹುಸಂಖ್ಯಾತ ಭಾರತೀಯರ ಪ್ರಾಮಾಣಿಕ ಸಂಪತ್ತು ರಾತ್ರಿ ಬೆಳಗಾಗುವುದರೊಳಗೆ ಬರಿದಾದುದರಿಂದಾದ ಗಾಯಕ್ಕೆ ಹೊಸ ನೋಟುಗಳ ಮಿತ ಲಭ್ಯತೆಯು ಸುಣ್ಣ ಸವರಿದಂತಾಗಿದೆಯೆಂದು ಮನಮೋಹನ್ ಟೀಕಿಸಿದ್ದಾರೆ.

ಒಬ್ಬನಲ್ಲಿ ಎಲ್ಲ ಪರಿಹಾರಗಳಿವೆ ಹಾಗೂ ಕಪ್ಪುಹಣ ಮಟ್ಟ ಹಾಕಲು ಹಿಂದಿನ ಸರಕಾರಗಳು ವಿಫಲವಾಗಿವೆಯೆಂದು ನಂಬುವುದು ತಪ್ಪು ಎಂದವರು ಸರಕಾರವನ್ನು ತಿವಿದಿದ್ದಾರೆ.

ತೆರಿಗೆಗಳ್ಳತನ ಹಾಗೂ ನಕಲಿ ನೋಟುಗಳನ್ನು ಭಯೋತ್ಪಾದಕರು ಬಳಸುವುದನ್ನು ತಡೆಯುವ ನೋಟು ರದ್ದತಿಯ ಹಿಂದಿನ ಗೌರವಾರ್ಹ ಹಾಗೂ ವೌಲ್ಯಯುತ ಉದ್ದೇಶಕ್ಕೆ ಹೃತ್ಪೂರ್ವಕ ಬೆಂಬಲವಿದೆ. ಆದರೆ, ಶೇ.90ರಷ್ಟು ನೌಕರರು ವೇತನವನ್ನು ನಗದು ರೂಪದಲ್ಲೇ ಪಡೆಯುತ್ತಿದ್ದಾರೆ ಹಾಗೂ 60 ಕೋಟಿಗೂ ಹೆಚ್ಚು ಭಾರತೀಯರು ಬ್ಯಾಂಕ್‌ಗಳೇ ಇಲ್ಲದ ಪಟ್ಟಣ ಹಾಗೂ ಹಳ್ಳಿಗಳಲಿದ್ದಾರೆ. ದೊಡ್ಡ ನೋಟುಗಳಲ್ಲಿರುವ ಅವರ ಹಣವನ್ನು ಯಾರು ರಕ್ಷಿಸುತ್ತಾರೆ? ಅದಕ್ಕೆ ಕಪ್ಪು ಹಣವೆಂಬ ಕಳಂಕ ಹಚ್ಚುವುದು ಹಾಗೂ ಈ ಲಕ್ಷಾಂತರ ಜನರ ಜೀವನವನ್ನು ಹದಗೆಡಿಸುವುದು ‘ಮಹಾ ದುರಂತ’ ಎಂದು ಮನಮೋಹನ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News