×
Ad

ನೋಟು ರದ್ದತಿಯಿಂದ ಏನನ್ನು ಸಾಧಿಸುವ ನಿರೀಕ್ಷೆಯಿತ್ತು ? ಕೇಂದ್ರ ಸರಕಾರಕ್ಕೆ ಸುಪ್ರೀಂ ಪ್ರಶ್ನೆ

Update: 2016-12-09 19:58 IST

ಹೊಸದಿಲ್ಲಿ, ಡಿ.9: ನೋಟು ರದ್ದುಗೊಳಿಸುವುದರಿಂದ ಏನನ್ನು ಸಾಧಿಸಬಹುದು ಎಂದು ನಿರೀಕ್ಷೆ ಇತ್ತು ಮತ್ತು ಈ ಮಹತ್ವದ ನಿರ್ಧಾರ ಅನುಷ್ಠಾನಕ್ಕೆ ಮುನ್ನ ಸೂಕ್ತ ಕಾರ್ಯ ಯೋಜನೆ ಸಿದ್ದವಾಗಿತ್ತೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ನೋಟು ರದ್ದತಿ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಡಿ.14ರಂದು ನಿರ್ಧರಿಸಲಾಗುವುದು ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಬ್ಯಾಂಕ್‌ನಿಂದ ಹಣ ಹಿಂಪಡೆಯುವ ಗರಿಷ್ಠ ಪರಿಮಿತಿಯನ್ನು ನಿಗದಿಗೊಳಿಸುವಂತೆ ಸೂಚಿಸಿದೆ. ಜನರು ವಾರಕ್ಕೆ ಕನಿಷ್ಟ 10 ಸಾವಿರ ರೂ. ಪಡೆಯಲು ಅವಕಾಶ ಇರಬೇಕು ಎಂದು ತಿಳಿಸಿದೆ.
 ನೋಟು ಅಮಾನ್ಯದ ಬಳಿಕ ಜನರು ಎದುರಿಸುತ್ತಿರುವ ಬವಣೆಯನ್ನು ಕಡಿಮೆಗೊಳಿಸಲು ಕೈಗೊಳ್ಳಲಾಗುವ ಕ್ರಮವನ್ನು ಪಟ್ಟಿ ಮಾಡುವಂತೆ ಪ್ರಧಾನ ನ್ಯಾಯಾಧೀಶ ಟಿ.ಎಸ್.ಠಾಕುರ್, ನ್ಯಾಯಾಧೀಶರಾದ ಎ.ಎಂ. ಖಾನ್‌ವಿಳ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವೊಂದು ತಿಳಿಸಿದೆ.
 ಕೇಂದ್ರ ಸರಕಾರವನ್ನು ಪ್ರತಿನಿಧಿಸಿರುವ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರಿಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗಳ ವಿವರ ಹೀಗಿದೆ:
 * ಈ ನಿರ್ಧಾರ ಕೈಗೊಳ್ಳುವ ಮೊದಲು ಸಾಕಷ್ಟು ಪೂರ್ವಸಿದ್ಧತೆ ಇತ್ತೇ.. ಅಥವಾ ಹಿಂದೆಮುಂದೆ ಆಲೋಚಿಸದೆ ಕೈಗೊಂಡ ನಿರ್ಧಾರವೇ..?
* ಎಷ್ಟು ಹಣ ವಾಪಾಸು ಬರಬಹುದು ಮತ್ತು ಎಷ್ಟು ಹಣ ಪ್ರಿಂಟ್ ಮಾಡಬೇಕಾಗುತ್ತದೆ ಎಂಬ ಬಗ್ಗೆ ಯೋಜನೆ ರೂಪಿಸಲಾಗಿತ್ತೇ?
 *ನೋಟು ರದ್ದತಿ ನಿರ್ಧಾರದ ಪ್ರಾಥಮಿಕ ಉದ್ದೇಶ ಏನು ?
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಕಪ್ಪುಹಣದ ನಿರ್ಮೂಲನೆ, ಭಯೋತ್ಪಾದಕರಿಗೆ ಹರಿದು ಬರುತ್ತಿದ್ದ ಹಣಕಾಸಿನ ನೆರವನ್ನು ತೊಡೆದು ಹಾಕುವುದು ಮತ್ತು ಖೋಟಾ ನೋಟಿನ ಹಾವಳಿ ತಡೆಗಟ್ಟುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದರು.
    
   ನೋಟು ಅಮಾನ್ಯದ ಬಗ್ಗೆ ರಹಸ್ಯ ಕಾಯ್ದುಕೊಳ್ಳುವ ಅನಿವಾರ್ಯತೆ ಇತ್ತು. ಆದ್ದರಿಂದ ಹಣದ ಕೊರತೆಯಾಗಿದೆ. ಸಮಸ್ಯೆ ಶೀಘ್ರದಲ್ಲಿ ನಿವಾರಣೆಯಾಗಲಿದೆ ಎಂದವರು ತಿಳಿಸಿದರು. ಈಗ ಎಟಿಎಂಗಳ ಎದುರು ಜನರ ಕ್ಯೂ ಕಡಿಮೆಯಾಗಿದೆ. ಎಟಿಎಂ ಎದುರು ಕೇವಲ 10 ಜನರ ಕ್ಯೂ ಅಷ್ಟೇ ಕಂಡು ಬರುತ್ತಿದೆ ಎಂದರು. ನೋಟು ಅಮಾನ್ಯದ ನಿರ್ಧಾರದ ಬಳಿಕ ಸಂಭವಿಸಿದ ದುರಂತದಲ್ಲಿ 90ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬುದು ರಾಜಕೀಯ ಹೇಳಿಕೆಯಾಗಿದೆ ಎಂದು ಅಟಾರ್ನಿ ಜನರಲ್ ತಿಳಿಸಿದಾಗ, ಆದರೆ ಸರಕಾರ ಹೇಳುತ್ತಿರುವುದಕ್ಕಿಂತ ಪರಿಸ್ಥಿತಿ ಭಿನ್ನವಾಗಿದೆ ಎಂದು ಅರ್ಜಿದಾರರು ಮತ್ತು ಸುಪ್ರೀಂಕೋರ್ಟ್ ತಿಳಿಸಿತು. ಜಿಲ್ಲಾ ಸಹಕಾರ ಬ್ಯಾಂಕ್‌ಗಳು ರದ್ದಾದ ಕರೆನ್ಸಿ ನೋಟುಗಳನ್ನು ಮತ್ತು ಕೆಲ ಷರತ್ತುಗಳಿಗೆ ಒಳಪಟ್ಟು ಠೇವಣಿಗಳನ್ನು ಸ್ವೀಕರಿಸುವ ಬಗ್ಗೆ ಪ್ರತ್ರಿಕ್ರಿಯೆ ನೀಡುವಂತೆ ಕೇಂದ್ರ ಸರಕಾಕ್ಕೆ ಸುಪ್ರೀಂಕೋರ್ಟ್ ಸೂಚಿಸಿತು.
    ರದ್ದಾದ ಕರೆನ್ಸಿ ನೋಟುಗಳನ್ನು ಸ್ವೀಕರಿಸಲು ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಮೇಲಿರುವ ನಿರ್ಬಂಧ ಸೇರಿದಂತೆ ಈ ವಿಷಯದ ಬಗ್ಗೆ ಸರಕಾರದ ನಿಲುವನ್ನು ತಿಳಿಸುವಂತೆ ಅಲ್ಲದೆ ಹಣ ಹಿಂಪಡೆಯುವ ಮಿತಿಯನ್ನು ನಿಗದಿಗೊಳಿಸಿದ ಬಳಿಕವೂ ಜನರಿಗೆ ಈ ಮೊತ್ತದಷ್ಟು ಹಣ ಯಾಕೆ ಸಿಗುತ್ತಿಲ್ಲ ಎಂದು ಪೀಠವು ಸರಕಾರವನ್ನು ಪ್ರಶ್ನಿಸಿತು.
ಹಣ ವಾಪಾಸು ಪಡೆಯುವ ಮಿತಿಯನ್ನು ಹೆಚ್ಚಿಸಬಹುದೇ ಎಂದು ಡಿ.14ಕ್ಕೆ ಮೊದಲು ತಿಳಿಸುವಂತೆ ಸರಕಾರಕ್ಕೆ ಕೋರ್ಟ್ ತಿಳಿಸಿತು. ಅಲ್ಲದೆ ನೋಟು ಅಮಾನ್ಯ ನಿರ್ಧಾರವು ಸಂವಿಧಾನದಡಿ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಡಿ.14ರಂದು ನಿರ್ಧರಿಸಲಾಗುವುದು . ಮುಂದಿನ ವಿಚಾರಣಾ ದಿನಾಂಕವಾದ ಡಿ.14ರಂದು 9 ಪ್ರಮುಖ ಪ್ರಶ್ನೆಗಳನ್ನು ಸರಕಾರದ ಮುಂದಿಡಲಾಗುತ್ತದೆ ಮತ್ತು ತೀರ್ಪನ್ನು ಜನವರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿತು .
  ಆದರೆ ನೋಟು ಅಮಾನ್ಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಕೋರ್ಟ್ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಭಾವನಾತ್ಮಕ ವಾದಗಳತ್ತ ಗಮನ ನೀಡದೆ ಕಾನೂನಾತ್ಮಕ ಅಂಶಗಳ ಬಗ್ಗೆ ಮಾತ್ರ ಗಮನ ಹರಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News