ಇಲ್ಲಿ ಖಾಸಗಿ ಲ್ಯಾಬ್ ಗಳಲ್ಲಿ ಎಂ ಆರ್ ಐ , ಸಿಟಿ ಸ್ಕ್ಯಾನ್ ಉಚಿತ !

Update: 2016-12-10 05:25 GMT

ಖಾಸಗಿ ಲ್ಯಾಬೊರೇಟರಿಗಳಲ್ಲಿ ಜನಸಾಮಾನ್ಯರಿಗೆ ಉಚಿತ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಒದಗಿಸಲು ದೆಹಲಿ ಸರ್ಕಾರ ಮುಂದಾಗಿದೆ. ಮೂರು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ದೆಹಲಿ ನಿವಾಸಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ದೆಹಲಿ ಸರ್ಕಾರ ಮಂಗಳವಾರ ಪ್ರಕಟಿಸಿದೆ. ರಾಜಧಾನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸುವ ಮೂಲಕ ಉಳಿಸಿದ ಹಣದಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಹಣ ಒದಗಿಸಲಾಗುತ್ತದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಘೋಷಿಸಿದ್ದಾರೆ.

ದೆಹಲಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಪಡೆಯಬೇಕಾದರೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ. 2019ರವರೆಗೂ ಕಾಯಲು ಈಗಾಗಲೇ ರೋಗಿಗಳಿಗೆ ಸೂಚನೆ ನೀಡಲಾಗಿದೆ ಎಂಬ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಅವರ ಸೂಚನೆಯಂತೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಫ್ಲೈಓವರ್‌ಗಳ ಸಕಾಲಿಕ ನಿರ್ಮಾಣದಿಂದ ಉಳಿದ ಹಣವನ್ನು ಬಡ ರೋಗಿಗಳಿಗೆ ಉಚಿತ ಔಷಧ ಒದಗಿಸಲು ಮತ್ತು ವೈದ್ಯಕೀಯ ತಪಾಸಣೆಗಳಿಗೆ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಉದ್ದೇಶಿತ ಫ್ಲೈಓವರ್‌ಗಳ ನಿರ್ಮಾಣವನ್ನು ಸಕಾಲಿಕವಾಗಿ ಮುಗಿಸಿದರೆ, 350 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಇದು ಮಂಜೂರಾದ ಬಜೆಟ್‌ಗಿಂತ ಕಡಿಮೆ ವೆಚ್ಚದಲ್ಲಿ ಆಗಲಿದೆ. ಈ ಹಣವನ್ನು ಆರೋಗ್ಯ ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದರ ಜತೆಗೆ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಎಂಆರ್‌ಐ ಯಂತ್ರಗಳನ್ನು ಅಳವಡಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ತಕ್ಷಣದ ಕ್ರಮವಾಗಿ, ಆಂಗೀಕೃತ ಖಾಸಗಿ ಲ್ಯಾಬ್‌ಗಳ ಜತೆ ಒಪ್ಪಂದ ಮಾಡಿಕೊಂಡು ಉಚಿತ ಸೇವೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News