ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಾಜಿ ಐಎಎಫ್ ವರಿಷ್ಠ ತ್ಯಾಗಿ, ಇತರರಿಗೆ ಸಿಬಿಐ ಕಸ್ಟಡಿ
ಹೊಸದಿಲ್ಲಿ,ಡಿ.10: 12 ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿಗೆ ಸಂಬಂಧಿಸಿದ 450 ಕೋ.ರೂ.ಗಳ ಆಗಸ್ಟಾ ವೆಸ್ಟಲ್ಯಾಂಡ್ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತೀಯ ವಾಯುಪಡೆ(ಐಎಎಫ್)ಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ,ಅವರ ಸೋದರ ಸಂಬಂಧಿ ಸಂಜೀವ ತ್ಯಾಗಿ ಮತ್ತು ವಕೀಲ ಗೌತಮ ಖೇತಾನ್ ಅವರಿಗೆ ಶನಿವಾರ ಇಲ್ಲಿಯ ಮಹಾನಗರ ನ್ಯಾಯಾಲಯವು ಡಿ.14ರವರೆಗೆ ಸಿಬಿಐ ಕಸ್ಟಡಿಯನ್ನು ವಿಧಿಸಿದೆ.
ಅಂತಾರಾಷ್ಟ್ರೀಯ ಪರಿಣಾಮಗಳನ್ನು ಹೊಂದಿರುವ ಅತ್ಯಂತ ದೊಡ್ಡ ಸಂಚನ್ನು ಬಯಲಿಗೆಳೆಯಬೇಕಿರುವುದರಿಂದ ತ್ಯಾಗಿ ಸೇರಿದಂತೆ ಆರೋಪಿಗಳ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂಬ ಸಿಬಿಐ ಕೋರಿಕೆಗೆ ಅಸ್ತು ಹೇಳಿದ ನ್ಯಾಯಾಧೀಶ ಸುಜಿತ್ ಸೌರಭ್ ಅವರು, ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯುವಂತಾಗಲು ಕಸ್ಟಡಿ ವಿಚಾರಣೆ ನಡೆಯಬೇಕು ಎಂದು ತನ್ನ ಆದೇಶದಲ್ಲಿ ಹೇಳಿದರು.
ಸಿಬಿಐ 10 ದಿನಗಳ ಕಸ್ಟಡಿಯನ್ನು ಕೋರಿತ್ತಾದರೂ,ಅದನ್ನು ವಿರೋಧಿಸಿದ ಆರೋಪಿಗಳ ಪರ ವಕೀಲರು, ಪ್ರಕರಣದಲ್ಲಿ ಎಫ್‌ಐಆರ್‌ನ್ನು ಮೂರು ವರ್ಷಗಳ ಹಿಂದೆ ದಾಖಲಿಸಲಾಗಿದ್ದು, ಈಗ ಬಂಧನಕ್ಕೆ ಹೊಸ ಕಾರಣಗಳೇನೂ ಇಲ್ಲ ಎಂದು ಹೇಳಿದರು.
ಆಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ 12 ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿ ನಿರ್ಧಾರವು ಸಾಮೂಹಿಕವಾಗಿತ್ತು ಮತ್ತು ಪ್ರಧಾನಿ ಕಚೇರಿಯೂ ಈ ನಿರ್ಧಾರದ ಭಾಗವಾಗಿತ್ತು ಎಂದು ತ್ಯಾಗಿ ಪರ ಹಿರಿಯ ವಕೀಲ ಎನ್.ಹರಿಹರನ್ ವಾದಿಸಿದರು.