ಮುಂಬೈ ಮೂಲದ ಐಸಿಸ್ ಕಾರ್ಯಕರ್ತ ಲಿಬಿಯಾದಲ್ಲಿ ಸೆರೆ

Update: 2016-12-10 15:06 GMT

ಮುಂಬೈ, ಡಿ.10: ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಯಾಗಿದ್ದಾನೆಂದು ಹೇಳಲಾಗಿರುವ ಥಾಣೆ ಮೂಲದ 28ರ ಹರೆಯದ ಯುವಕನೋರ್ವನನ್ನು ಲಿಬಿಯಾದಲ್ಲಿ ಸೆರೆ ಹಿಡಿಯಲಾಗಿದೆ.

ಥಾಣೆ ಜಿಲ್ಲೆಯ ಮುಂಬ್ರಾ ನಿವಾಸಿಯಾಗಿರುವ ತಬ್ರೇಝ್ ಮುಹಮ್ಮದ್ ಥಾಂಬೆ ಬಂಧಿತ ವ್ಯಕ್ತಿ. ಈ ವರ್ಷದ ಆರಂಭದಲ್ಲಿ ಈಜಿಪ್ಟ್‌ಗೆ ಕೆಲಸಕ್ಕೆ ಸೇರಲು ಹೋಗುವುದಾಗಿ ತಿಳಿಸಿದ್ದ ತಬ್ರೇಝ್ ಲಿಬಿಯಾ ತಲುಪಿದ್ದ. ಇಲ್ಲಿ ಈತ ತನ್ನ ಸ್ನೇಹಿತ ಆಲಿ ಎಂಬಾತನೊಂದಿಗೆ ಅಮೆರಿಕಾ ಬೆಂಬಲಿತ ಪಡೆಗಳ ವಿರುದ್ಧ ಹೋರಾಡುತ್ತಿರುವ ಐಸಿಸ್ ಪಡೆಯನ್ನು ಸೇರಿಕೊಂಡ . ಈತನನ್ನು ಐಸಿಸ್‌ಗೆ ಸೇರ್ಪಡೆಗೊಳಿಸಿದ ವ್ಯಕ್ತಿ ಕಳೆದ ವಾರದ ತನಕ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮದ ನೆರವಿನಿಂದ ಈತನ ಕುಟುಂಬವರ್ಗದೊಂದಿಗೆ ಸಂಪರ್ಕದಲ್ಲಿದ್ದ ಎಂದು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅಬ್ರೇಝ್‌ನ ಕಿರಿಯ ಸಹೋದರ ಎಟಿಎಸ್ ಅನ್ನು ಸಂಪರ್ಕಿಸಿ ದೂರು ದಾಖಲಿಸಿದ ಬಳಿಕ ಕಳೆದ ಕೆಲ ತಿಂಗಳಿನಿಂದ ತಬ್ರೇಝ್‌ನ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿತ್ತು. ಈತ ಲಿಬಿಯಾದಲ್ಲಿ ಇರುವ ಮಾಹಿತಿ ದೊರಕಿತ್ತು . ಇನ್ನೂ ಕೆಲವರು ತಬ್ರೇಝ್ ಜೊತೆ ಸಂಪರ್ಕದಲ್ಲಿರುವ ಸಾಧ್ಯತೆ ಇದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರತಕ್ಕೆ ಮರಳುವಂತೆ ಆತನ ಮನವೊಲಿಸಲು ಕುಟುಂಬ ವರ್ಗದವರು ಪ್ರಯತ್ನಿಸಿದ್ದರು. ಆದರೆ ಪ್ರಸ್ತುತ ತಾನು ಆರಾಮವಾಗಿದ್ದೇನೆ ಎಂದುತ್ತರಿಸಿ ಭಾರತಕ್ಕೆ ಮರಳಲು ನಿರಾಕರಿಸಿದ್ದ ತಬ್ರೇಝ್, ತನ್ನೊಡನೆ ಸೇರಿಕೊಳ್ಳುವಂತೆ ಅವರಿಗೆ ಆಮಿಷವೊಡ್ಡಿದ್ದ . ತನ್ನ ಪತ್ನಿ, ಸಹೋದರ ಮತ್ತು ತಾಯಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತಬ್ರೇಝ್, ಐಸಿಸ್ ಪರ ತಾನು ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದ. ಸ್ನಾತಕೋತ್ತರ ಪದವೀಧರನಾಗಿರುವ ತಬ್ರೇಝ್, ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಈತ ಐಸಿಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News