×
Ad

ಜಯಲಲಿತಾ ಸೋದರ ಸೊಸೆಯಿಂದ ಆಸ್ತಿ ಹಕ್ಕು ಪ್ರತಿಪಾದನೆ

Update: 2016-12-10 22:17 IST

ಚೆನೈ,ಡಿ.10: ಇತ್ತೀಚಿಗೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬಿಟ್ಟುಹೋಗಿರುವ ನೂರಾರು ಕೋಟಿ ರೂ.ಗಳ ಆಸ್ತಿ ಯಾರ ಪಾಲಾಗಲಿದೆ ಎನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಜಯಲಲಿತಾ ಉಯಿಲನ್ನು ಬರೆದಿಟ್ಟಿದ್ದಾರೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಆಸ್ತಿ ಮಾಜಿ ಮುಖ್ಯಮಂತ್ರಿಯ ಆಪ್ತಗೆಳತಿ ಶಶಿಕಲಾ ಮಡಿಲು ಸೇರುತ್ತದೋ ಅಥವಾ ಹತ್ತಿರದ ಸಂಬಂಧಿಗಳಾದ ಅಣ್ಣನ ಮಕ್ಕಳಿಗೆ ಸಿಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕು. ತನ್ಮಧ್ಯೆ,ಜಯಲಲಿತಾರ ಅಣ್ಣ ದಿ.ಜಯಕುಮಾರ್ ಅವರ ಪುತ್ರಿ ದೀಪಾ ಜಯಕುಮಾರ್ (42) ತಾನು ಆಸ್ತಿಯ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದೇನೆ ಮತ್ತು ಅದಕ್ಕಾಗಿ ಕಾನೂನು ಹೋರಾಟ ನಡೆಸಲೂ ಸಿದ್ಧ ಎಂದು ಘೋಷಿಸಿದ್ದಾರೆ.

ದೀಪಿಕಾ ಬ್ರಿಟನ್ನಿನ ಕಾರ್ಡಿಫ್ ವಿವಿಯಿಂದ ಅಂತರರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಎಂಎ ಪದವಿಯನ್ನು ಪಡೆದಿದ್ದು, ಚೆನ್ನೈನ ತ್ಯಾಗರಾಜ ನಗರದಲ್ಲಿ ವಾಸವಿದ್ದಾರೆ. ಅವರ ಸೋದರ ದೀಪಕ್ ಜಯಲಲಿತರ ಅಂತ್ಯಸಂಸ್ಕಾರದಲ್ಲಿ ಶಶಿಕಲಾ ಜೊತೆಗೆ ಅಂತಿಮ ವಿಧಾನಗಳನ್ನು ನೆರವೇರಿಸಿದ್ದರೆ ದೀಪಾಗೆ ಹತ್ತಿರ ಸುಳಿಯಲೂ ಅವಕಾಶ ದೊರಕಿರಲಿಲ್ಲ. ಜಯಲಲಿತಾ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ದೀಪಾಗೆ ಆಸ್ಪತ್ರೆಯನ್ನು ಪ್ರವೇಶಿಸಲು ಅವಕಾಶ ನೀಡದಂತೆ ಭದ್ರತಾ ಸಿಬ್ಬಂದಿಗಳಿಗೆ ‘ಮೇಲಿನವರ ’ ಕಟ್ಟಪ್ಪಣೆಯಿತ್ತು. ದೀಪಾರನ್ನು ಭದ್ರತಾ ಸಿಬ್ಬಂದಿಗಳು ತಡೆಯುವುದನ್ನು ಟಿವಿ ಕ್ಯಾಮರಾಗಳು ಸೆರೆ ಹಿಡಿದಿದ್ದವು. ತನ್ಮೂಲಕ ದೀಪಾ ಪ್ರಚಾರ ಪಡೆದಿದ್ದರು. ಇತ್ತೀಚಿನ ಕೆಲವು ವಾರಗಳಲ್ಲಿ ಶಶಿಕಲಾಗೆ ಪಥ್ಯವಾಗದ ಹಲವಾರು ಪ್ರಶ್ನೆಗಳನ್ನು ದೀಪಾ ಎತ್ತಿದ್ದರು.

ನ್ಯೂಸ್ ಮಿನಿಟ್‌ಗೆ ನೀಡಿರುವ ಸಂದರ್ಶನದಲ್ಲಿ ದೀಪಾ ಎಡಿಎಂಕೆ ಪಕ್ಷದ ನಾಯಕಿಯಾಗಿ ಶಶಿಕಲಾ ಅಧಿಕಾರ ವಹಿಸಿಕೊಂಡರೆ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ತನ್ನೊಂದಿಗೆ ಅತ್ತೆ ಜಯಲಲಿತಾ ಚೆನ್ನಾಗಿಯೇ ಇದ್ದರು. ಆದರೆ ಕೆಲವು ಕಾಣದ ಶಕ್ತಿಗಳು ಇತ್ತೀಚಿನ ವರ್ಷಗಳಲ್ಲಿ ಅವರನ್ನು ತಮ್ಮಿಂದ ದೂರ ಮಾಡಿದ್ದವು ಎಂದು ಆರೋಪಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಜನರು ಬಯಸಿದರೆ ರಾಜಕೀಯವನ್ನು ಪ್ರವೇಶಿಸುವುದಾಗಿ ಹೇಳಿಕೊಂಡರು. ದೀಪಾ ಜಯಲಲಿತಾರ ರೂಪವನ್ನೇ ಹೊಂದಿದ್ದು ಈ ಹಿನ್ನೆಲೆಯಲ್ಲಿ ಎಡಿಎಂಕೆ ಪಕ್ಷವನ್ನು ಮುನ್ನಡೆಸುವಂತೆ ಕೆಲವರು ಆಕೆಗೆ ದುಂಬಾಲು ಬಿದ್ದಿದ್ದಾರೆನ್ನಲಾಗಿದೆ.

ಆಸ್ತಿಯ ಆಸೆಯಿಂದ ನೀವೀಗ ಮುಂಚೂಣಿಗೆ ಬಂದಿದ್ದೀರಿ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ದೀಪಾ, ಆಸ್ತಿ ಯಾವಾಗಲೂ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎನ್ನುವುದು ಇಂತಹ ಆರೋಪಗಳನ್ನು ಮಾಡುವವರಿಗೆ ಗೊತ್ತಿರಬೇಕು. ಆಸ್ತಿಗಾಗಿ ಕಾನೂನು ಹೋರಾಟ ಮಾಡಬೇಕೆಂದರೆ ಅದಕ್ಕೆ ನಾನು ಸಿದ್ಧ. ಆದರೆ ಅದರ ಅಗತ್ಯ ಬೀಳುವುದಿಲ್ಲ ಎಂದುಕೊಂಡಿದ್ದೇನೆ. ಅತ್ತೆ ಜಯಲಲಿತಾ ಉಯಿಲು ಬರೆದಿಟ್ಟಿದ್ದರೆ ಅದರ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳಲು ನಾನು ಸಿದ್ಧನಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News