ಕಾನೂನು ಸಂಸ್ಥೆಯ ಕಚೇರಿಯಿಂದ 13 ಕೋಟಿ ರೂಪಾಯಿ ವಶಕ್ಕೆ
ಹೊಸದಿಲ್ಲಿ, ಡಿ.11: ದಕ್ಷಿಣ ದಿಲ್ಲಿಯಲ್ಲಿರುವ ಕಾನೂನು ಸಂಸ್ಥೆಯೊಂದರ ಮೇಲೆ ಕಳೆದ ರಾತ್ರಿ ಪೊಲೀಸರು ದಾಳಿ ನಡೆಸಿ ಸುಮಾರು 13.5 ಕೋಟಿ ರೂ. ಹಣ ವಶಕ್ಕೆ ಪಡೆದಿದ್ದು ಇದರಲ್ಲಿ 2.6 ಕೋಟಿಯಷ್ಟು ಮೊತ್ತದ ಹೊಸ ನೋಟುಗಳು ಸೇರಿವೆ.
ರೋಹಿತ್ ಟಂಡನ್ ಎಂಬವರಿಗೆ ಸೇರಿದ ಟಿ ಆ್ಯಂಡ್ ಟಿ ಕಾನೂನು ಸಂಸ್ಥೆಯ ಮೇಲೆ ಅಪರಾಧ ಪತ್ತೆ ದಳದವರು ದಾಳಿ ನಡೆಸಿದ್ದು 13.5 ಕೋಟಿ ರೂ. ಹಣ ವಶಪಡಿಸಿಕೊಂಡಿದ್ಧಾರೆ. ಇದರಲ್ಲಿ 2.6 ಕೋಟಿಯಷ್ಟು ಹಣ ಹೊಸ ನೋಟಿನಲ್ಲಿದ್ದರೆ 7 ಕೋಟಿಯಷ್ಟು ಹಣ ಅಮಾನ್ಯಗೊಂಡ 1 ಸಾವಿರ ರೂ. ನೋಟುಗಳಲ್ಲಿತ್ತು ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ತಿಳಿಸಿದ್ದಾರೆ. ದಾಳಿ ನಡೆಯುವ ವೇಳೆ ಕಚೇರಿಗೆ ಬೀಗ ಹಾಕಲಾಗಿತ್ತು ಮತ್ತು ಕಾವಲುಗಾರ ಉಪಸ್ಥಿತನಿದ್ದ . ಹಣವನ್ನು ದಾಸ್ತಾನು ಇಡುವ ಹಲವು ಗೋದಾಮುಗಳಲ್ಲಿ ಇದೂ ಒಂದಾಗಿದೆ. ಮುಂದಿನ ತನಿಖೆಯ ಸಂದರ್ಭ ಇನ್ನಷ್ಟು ಮೊತ್ತದ ಹಣ ಪತ್ತೆಯಾಗಬಹುದು . ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿತ್ ಟಂಡನ್ ಕಚೇರಿ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಬಳಿಕ ಟಂಡನ್ 125 ಕೋಟಿ ರೂ. ಆದಾಯವನ್ನು ಘೋಷಿಸಿದ್ದ ಎಂದು ಇಲಾಖೆಯ ಮೂಲಗಳು ತಿಳಿಸಿವೆ.