ಎಸ್ ಐ ಓ ರಾಷ್ಟ್ರೀಯ ಅಧ್ಯಕ್ಷರಾಗಿ ನಹಾಸ್ ಮಾಳ ಆಯ್ಕೆ
ಕ್ಯಾಲಿಕಟ್, ಡಿ.11 : ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಇದರ 2017-2018ರ ಅವಧಿಗೆ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕೇರಳದ ನಹಾಸ್ ಮಾಳ ಆಯ್ಕೆಯಾಗಿದ್ದಾರೆ.
ಕೇರಳದ ಶಾಂತಪುರಂ ಕ್ಯಾಂಪಸ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನ ಜಲಾಲುದ್ದೀನ್ ಉಮರಿಯವರ ಅಧ್ಯಕ್ಷತೆಯಲ್ಲಿ ಡಿ.10ರಿಂದ 12ರವರೆಗೆ ನಡೆಯುತ್ತಿರುವ ಎಸ್ ಐ ಓ ನ ಎಲ್ಲಾ ರಾಜ್ಯಗಳ ರಾಜ್ಯ ಸಲಹಾ ಸಮಿತಿಯ ಸದಸ್ಯರ ಸಭೆಯಲ್ಲಿ ನಡೆಸಲಾದ ಚುನಾವಣೆಯಲ್ಲಿ ನಹಾಸ್ ಮಾಳರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಹಾಫಿಝ್ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಪಿಎಚ್ ಡಿ ವಿದ್ಯಾರ್ಥಿಯಾಗಿರುವ ನಹಾಸ್ ಮಾಳ, ಪ್ರಸ್ತುತ ಜಾಮಿಯಾ ಶಾಂತಪುರಂ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2015-16ರ ಅವಧಿಯಲ್ಲಿ ಎಸ್ ಐ ಓ ನ ಕೇರಳದ ಅಧ್ಯಕ್ಷರಾಗಿಯೂ ಸಲ್ಲಿಸಿದ್ದಾರೆ.
ಈ ಸಂದರ್ಭ ಸಭೆಯಲ್ಲಿ ಎಸ್ ಐ ಓ ನ ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷರಾದ ಇಕ್ಬಾಲ್ ಹುಸೇನ್, ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಸಾದತುಲ್ಲಾ ಹುಸೇನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.