'ಟೆರರ್ ಅಲರ್ಟ್' : ರಾಷ್ಟ್ರಪತಿ ಭವನದ ಸಮೀಪ 70 ವರ್ಷದ ಮೌಲ್ವಿ ಪೊಲೀಸ್ ವಶಕ್ಕೆ , ಬಳಿಕ ...

Update: 2016-12-13 06:46 GMT

ಹೊಸದಿಲ್ಲಿ, ಡಿ.13: ಶನಿವಾರ ಸಂಜೆ ರಾಜಧಾನಿಯಲ್ಲಿ ಟೆರರ್ ಅಲರ್ಟ್ ಘೋಷಿಸಲಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಕಾಟ ಅವರನ್ನು ರಾಷ್ಟ್ರಪತಿ ಭವನದ ಎದುರಿಗಿರುವ ಬಾಡಿಗಾರ್ಡ್ ಲೈನ್ಸ್‌ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಮಝರ್‌ ಬಳಿ ಕೊಂಡೊಯ್ದಿತು. ಇಲ್ಲಿ 70 ವರ್ಷದ ಮೌಲವಿಯೊಬ್ಬ ಕಳೆದ 42 ವರ್ಷಗಳಿಂದ ವಾಸವಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಮೌಲವಿ ಗಝಿ ನೂರುಲ್ ಹಸನ್ ಎಂಬ ಹೆಸರಿನ ಈ ಮೌಲ್ವಿ ತನ್ನನ್ನು ಇಸ್ಲಾಂ ಪ್ರಚಾರಕನೆಂದು ಪರಿಚಯಿಸಿಕೊಂಡಿದ್ದು, ತಾನು ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಶಿಕ್ಷಕನಾಗಿದ್ದೆನೆಂದು ಹೇಳಿಕೊಂಡಿದ್ದಾನೆ. ಈತನನ್ನು ವಶಪಡಿಸಿಕೊಂಡ ಪೊಲೀಸರು ಆತನನ್ನು ಸುಮಾರು ಏಳು ತಾಸುಗಳಿಗೂ ಹೆಚ್ಚು ಸಮಯ ವಿಚಾರಣೆ ನಡೆಸಿದ್ದರು. ನಂತರ ಆತ ತನ್ನ ಪಾಸ್ ಪೋರ್ಟ್, ಮತದಾರರ ಗುರುತು ಕಾರ್ಡ್, ವಿಳಾಸದ ದಾಖಲೆ ಹಾಗೂ ವಿದ್ಯುತ್ ಬಿಲ್‌ ಮುಂತಾದ ಸಾಕ್ಷ್ಯಗಳನ್ನುಒದಗಿಸಿದ ಬಳಿಕ ಆತನನ್ನು ಬಿಡುಗಡೆಗೊಳಿಸಲಾಯಿತು.

ಅರಣ್ಯದತ್ತ ಸಾಗುವ ಬಾಡಿಗಾರ್ಡ್ ಲೈನ್ಸ್ ಗೋಡೆಯನ್ನು ಹತ್ತುತ್ತಿದ್ದ ಹಸನ್ ನನ್ನು ಪೊಲೀಸ್ ಪೆಟ್ರೋಲಿಂಗ್ ವ್ಯಾನಿನ್ನಲ್ಲಿದ್ದ ಸಿಬ್ಬಂದಿ ನೋಡಿದ್ದರು. ಅರಣ್ಯದಲ್ಲಿ ಮಝರ್ ಒಂದರ ಇರುವಿಕೆಯ ಬಗ್ಗೆ ತಿಳಿಯದೇ ಇದ್ದ ಸುರಕ್ಷಾ ಸಿಬ್ಬಂದಿ ಹಿರಿಯಾಧಿಕಾರಿಗಳಿಗೆ ತಿಳಿಸಿದ್ದು, ಕೆಲವೇ ಗಂಟೆಗಳಲ್ಲಿ ಪೊಲೀಸರ ತಂಡವೊಂದು ಹಸನ್  ಎದುರಿಗಿತ್ತು  ಹಾಗೂ ಆತನನ್ನು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡಿತ್ತು.

‘‘ನಾನು ಮನೆಯೊಳಗೆ ಹೋದಾಕ್ಷಣ ಪೊಲೀಸರು ಬಾಗಿಲು ಬಡಿಯಲಾರಂಭಿಸಿದ್ದು ಬಾಡಿಗಾರ್ಡ್ ಲೈನ್ಸ್ ನಲ್ಲಿ ನಾನೇಕೆಹಾಗೂ ಎಷ್ಟು ಸಮಯದಿಂದ ವಾಸವಾಗಿದ್ದೇನೆ ಎಂದು ಅವರು ನನ್ನನ್ನು ಪ್ರಶ್ನಿಸಿದ್ದರು. ಈ ರೀತಿ ಹಿಂದೆ ಯಾವತ್ತೂ ಆಗಿರಲಿಲ್ಲ’’ ಎಂದು ಮೌಲ್ವಿ ಅಲವತ್ತುಕೊಂಡಿದ್ದಾರೆ.

ಅರಣ್ಯದೊಳಗೆ ಮಝರ್ ಇರುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಹಾಗೂ ಅಲ್ಲಿಗೆ ಹೋಗಲು ಯಾವುದೇ ಗೇಟ್ ಕೂಡ ಇಲ್ಲದ ಕಾರಣ, ಗೋಡೆ ಹತ್ತಿಯೇ ಹೋಗಬೇಕಾಗುತ್ತದೆ. ಮಝರ್ ನಲ್ಲಿನ ಒಂದು ಕೋಣೆಯಲ್ಲಿ ತನ್ನ ಕೆಲವೇ ಕೆಲವು ಅನುಯಾಯಿಗಳಿಗೆ ಕುರ್ ಆನ್  ಪ್ರವಚನವನ್ನು ಕಳೆದ 42 ವರ್ಷಗಳಿಂದ ಹಸನ್ ನೀಡುತ್ತಿದ್ದಾರೆ.
 

ಈ ಘಟನೆಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ ಇದೊಂದು ಸಾಮಾನ್ಯ ತಪಾಸಣೆಯಾಗಿದ್ದು, ವಿಐಪಿ ವಲಯವಾದ ಲುಟ್ಯನ್ಸ್ ದಿಲ್ಲಿಯಲ್ಲಿ ಆತ ಇರುವುದರಿಂದ ಆತನನ್ನು ವಶಪಡಿಸಿಕೊಳ್ಳಲಾಯಿತು. ಮೇಲಾಗಿ ಆತ ಗೋಡೆ ಹತ್ತುವುದನ್ನು ನೋಡಿದ್ದ ಪೊಲೀಸ್ ಸಿಬ್ಬಂದಿ ಸಂಶಯಗೊಂಡಿದ್ದರು ಎಂದು ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News