ರಾಷ್ಟ್ರಗೀತೆಗೆ ಅಗೌರವ: 12 ಮಂದಿಯ ಬಂಧನದ ವಿರುದ್ಧ ಪ್ರತಿಭಟನೆ
ತಿರುವನಂತಪುರ, ಡಿ.13: ಕೇರಳದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಸಿನೆಮಾ ಪ್ರದರ್ಶನದ ವೇಳೆ ರಾಷ್ಟ್ರಗೀತೆಗೆ ಗೌರವ ನೀಡದ ಆರೋಪದಲ್ಲಿ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದಿರುವುದನ್ನು 12 ಜನರ ಗುಂಪೊಂದು ಇಂದು ಇಲ್ಲಿನ ಚಿತ್ರಮಂದಿರವೊಂದರ ಹೊರಗೆ ಪ್ರತಿಭಟಿಸಿದೆ.
ರಾಷ್ಟ್ರಗೀತೆಯು ಡಿಜಿಟಲ್ ಪದ್ಯವಲ್ಲ. ರಾಷ್ಟ್ರಧ್ವಜವು ದೃಶ್ಯ-ಶ್ರವ್ಯವಲ್ಲ. ಸಿನೆಮಾ ಪ್ರಾಥಮಿಕವಾಗಿ ಒಂದು ಮನೋರಂಜನೆ. ಚಿತ್ರಮಂದಿರವು ಮನೋರಂಜನೆಯನ್ನು ಮಾರುವ ಸ್ಥಳ ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು, ಚಿತ್ರೋತ್ಸವದ ಪ್ರಧಾನ ವೇದಿಕೆಯಾದ ಟಾಗೋರ್ ಚಿತ್ರಮಂದಿರದ ಮುಂದೆ ಅವರು ಪ್ರತಿಭಟನೆ ನಡೆಸಿದ್ದಾರೆ.
ನನ್ನ ರಾಷ್ಟ್ರಗೀತೆಯನ್ನು ಅವಮಾನಿಸಬೇಡಿ ಎಂದು ಇನ್ನೊಂದು ಫಲಕದಲ್ಲಿ ಬರೆದಿತ್ತು. ತಾವು ಭಾರತವನ್ನು ಪ್ರೀತಿಸುತ್ತಿದ್ದೇವೆ. ರಾಷ್ಟ್ರೀಯತೆಯನ್ನು ಹೇರಲಾಗದೆಂದು ಪ್ರತಿಭನಾಟಕಾರರು ಹೇಳಿದ್ದಾರೆ.
ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಆರೋಪದಲ್ಲಿ ನಿನ್ನೆ ರಾತ್ರಿ ಉತ್ಸವದ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 2 ಚಿತ್ರಮಂದಿರಗಳಿಂದ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಬಂಧಿತರನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.