ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ ಜೀವನಶ್ರೇಷ್ಠ ಸಾಧನೆ
ದುಬೈ, ಡಿ.13: ಇಂಗ್ಲೆಂಡ್ ವಿರುದ್ಧ 4ನೆ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ಭಾರತೀಯ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಭಡ್ತಿ ಪಡೆದು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಇದು ಕೊಹ್ಲಿ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.
ಮಂಗಳವಾರ ಇಲ್ಲಿ ನಡೆದ ಐಸಿಸಿ ಆಟಗಾರರ ರ್ಯಾಂಕಿಂಗ್‌ನಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ನಂ.1 ಬೌಲರ್ ಆಗಿ ಮುಂದುವರಿದಿದ್ದಾರೆ.
28ರ ಪ್ರಾಯದ ಕೊಹ್ಲಿ ಮುಂಬೈ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 235 ರನ್ ಗಳಿಸಿದ್ದರು. ಈ ಮೂಲಕ ರ್ಯಾಂಕಿಂಗ್‌ನಲ್ಲಿ 53 ಅಂಕ ಗಳಿಸಿದ ಕೊಹ್ಲಿ ಒಟ್ಟು 886 ಪಾಯಿಂಟ್‌ನೊಂದಿಗೆ ಜೀವನಶ್ರೇಷ್ಠ ದ್ವಿತೀಯ ಸ್ಥಾನಕ್ಕೇರಿದರು.
ಕೊಹ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಕೊಹ್ಲಿ ಪ್ರಸ್ತುತ ಏಕದಿನ ರ್ಯಾಂಕಿಂಗ್‌ನಲ್ಲೂ ದ್ವಿತೀಯ ಸ್ಥಾನದಲ್ಲಿದ್ದರೆ, ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಇದೇ ವೇಳೆ, ಅಶ್ವಿನ್ ಐಸಿಸಿ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್ ಮುಂಬೈ ಟೆಸ್ಟ್‌ನಲ್ಲಿ 167 ರನ್‌ಗೆ 12 ವಿಕೆಟ್‌ಗಳನ್ನು ಕಬಳಿಸಿದ್ದರು. ಅಶ್ವಿನ್ ಅಕ್ಟೋಬರ್‌ನಲ್ಲಿ ನಂ.1ಸ್ಥಾನಕ್ಕೆ ಮರಳಿದ್ದರು.
ಅಶ್ವಿನ್ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲೂ ಅಗ್ರ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್‌ಗಿಂತ 78 ಅಂಕದಿಂದ ಮುಂದಿದ್ದಾರೆ.
ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ 5 ಸ್ಥಾನ ಮೇಲಕ್ಕೇರಿ 24ನೆ ಸ್ಥಾನಕ್ಕೇರಿದರೆ, ಆಲ್‌ರೌಂಡರ್ ಜಯಂತ್ ಯಾದವ್ 31 ಸ್ಥಾನ ಭಡ್ತಿ ಪಡೆದು 56ನೆ ಸ್ಥಾನ ತಲುಪಿದೆ.
ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್‌ನಲ್ಲಿ ಭಾರತ 115 ಅಂಕ ಗಳಿಸಿ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್, ಆಸ್ಟ್ರೇಲಿಯ, ಪಾಕಿಸ್ತಾನ, ದ.ಆಫ್ರಿಕ, ನ್ಯೂಝಿಲೆಂಡ್, ಶ್ರೀಲಂಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ಹಾಗೂ ಝಿಂಬಾಬ್ವೆ ಬಳಿಕದ ಸ್ಥಾನದಲ್ಲಿವೆ.