×
Ad

ಚಂಡಮಾರುತದಿಂದ ಪಿಚ್‌ಗೆ ಹಾನಿಯಾಗಿಲ್ಲ: ಟಿಎನ್‌ಸಿಎ

Update: 2016-12-13 22:45 IST

ಚೆನ್ನೈ, ಡಿ.13: ಚೆನ್ನೈಗೆ ಸೋಮವಾರ ಅಪ್ಪಳಿಸಿರುವ ವಾರ್ದಾ ಚಂಡಮಾರುತದಿಂದ ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ಹಾಗೂ ಔಟ್ ಫೀಲ್ಡ್‌ಗೆ ಹಾನಿಯಾಗಿಲ್ಲ. ಆದರೆ, ಚಂಡಮಾರುತದಿಂದ ಸ್ಟೇಡಿಯಂನ ಒಳಗೆ ಹಾಗೂ ಹೊರಗಿನ ಭಾಗಗಳಿಗೆ ಹಾನಿಯಾಗಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಕಾರ್ಯದರ್ಶಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

 ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಇಲ್ಲಿ ನಿಗದಿಯಾಗಿದೆ.

‘‘ಸೈಕ್ಲೋನ್‌ನಿಂದ ಸ್ಟೇಡಿಯಂನ ಪಿಚ್ ಹಾಗೂ ಹೊರಾಂಗಣಕ್ಕೆ ಹಾನಿಯಾಗಿಲ್ಲ. ಆದರೆ, ಬಿಳಿಬಣ್ಣದ ದೊಡ್ಡ ಪರದೆಗೆ (ಸೈಡ್‌ಸೈಟ್ ಸ್ಕ್ರೀನ್) ಹಾನಿಯಾಗಿದೆ. ಬಲ್ಬ್‌ಗಳು ಒಡೆದು ಹೋಗಿವೆ, ಏರ್ ಕಂಡೀಶನ್ ಕೆಟ್ಟುಹೋಗಿದೆ. ಸ್ಟೇಡಿಯಮ್‌ಗೆ ಬರುವ ಹಾದಿಯಲ್ಲಿರುವ ನೂರಾರು ಮರಗಳು ಧರೆಗುರುಳಿವೆ. ಮುಂದಿನ ಎರಡು ದಿನಗಳಲ್ಲಿ ಎಲ್ಲವನ್ನು ಸರಿಯಾಗಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. 5ನೆ ಟೆಸ್ಟ್‌ಗೆ ಸಂಪೂರ್ಣ ಸಜ್ಜಾಗುವ ವಿಶ್ವಾಸ ನಮಗಿದೆ’’ಎಂದು ವಿಶ್ವನಾಥನ್ ತಿಳಿಸಿದ್ದಾರೆ.

ಟಿಎನ್‌ಸಿಎಯೊಂದಿಗಿನ ವಿವಾದದಿಂದಾಗಿ ಕಳೆದ ಮೂರು ವರ್ಷಗಳಿಂದ ಚೆನ್ನೈ ಮಹಾನಗರ ಪಾಲಿಕೆಯಿಂದ ಲಾಕ್ ಆಗಿರುವ ಸ್ಟೇಡಿಯಂನ ಮೂರು ಸ್ಟಾಂಡ್‌ಗಳು ಟೆಸ್ಟ್ ಪಂದ್ಯದ ವೇಳೆ ಬಂದ್ ಆಗಿರುತ್ತವೆ ಎಂದು ವಿಶ್ವನಾಥನ್ ಖಚಿತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News