ಕ್ಯಾಶ್‌ಲೆಸ್: 5 ರಾಜ್ಯಗಳಲ್ಲಿ ನೆಟ್‌ವರ್ಕ್ ಸಮಸ್ಯೆ

Update: 2016-12-13 18:28 GMT

ಹೊಸದಿಲ್ಲಿ, ಡಿ.13: ನೋಟು ರದ್ದತಿ ಹಿನ್ನೆಲೆಯಲ್ಲಿ ವಾರಾಂತ್ಯ ಶಾಪಿಂಗ್‌ಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಬಳಕೆ ಹೆಚ್ಚಿದ್ದು, ರವಿವಾರ ಸಂಜೆ ದಿಢೀರನೇ ಕಾರ್ಡ್ ನೆಟ್‌ವರ್ಕ್ ಕೈಕೊಟ್ಟಿದ್ದರಿಂದ ವ್ಯಾಪಾರಿಗಳು ತಲೆ ಮೇಲೆ ಕೈಹೊತ್ತು ಕೂರಬೇಕಾಯಿತು.

ಹಲವು ನೆಟ್‌ವರ್ಕ್‌ಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಹತಾಶರಾದರು. ಕಾರ್ಡ್ ಪಾವತಿಗೆ ಮುಂದಾದ ಗ್ರಾಹಕರನ್ನು ಅನಿವಾರ್ಯವಾಗಿ ಹಿಂದಕ್ಕೆ ಕಳುಹಿಸುವ ಸ್ಥಿತಿ ನಿರ್ಮಾಣವಾಯಿತು. ಅತ್ಯಧಿಕ ವಹಿವಾಟು ನಡೆಯುವ ಸಮಯವಾದ ಸಂಜೆ 6ರಿಂದ 8 ಗಂಟೆ ಅವಧಿಯಲ್ಲಿ ನೆಟ್‌ವರ್ಕ್ ದೇಶದ ಹಲವೆಡೆ ಕೈಕೊಟ್ಟಿತು. ದಿಲ್ಲಿ, ಮುಂಬೈ, ಗುಜರಾತ್, ಕೊಲ್ಕತ್ತಾ ಹಾಗೂ ಗೋವಾದಲ್ಲಿ ಕೂಡಾ ಕಾರ್ಡ್ ನೆಟ್‌ವರ್ಕ್‌ನಲ್ಲಿ ವ್ಯಾಪಕ ಸಮಸ್ಯೆ ಕಾಣಿಸಿಕೊಂಡಿತು. ದೊಡ್ಡ ಚಿಲ್ಲರೆ ಮಳಿಗೆಗಳಲ್ಲಿ ಉದ್ದುದ್ದ ಸಾಲುಗಳು ಕಂಡುಬಂದವು. ಇದು ಹೊಟೇಲ್‌ಗಳು ಹಾಗೂ ಇತರ ಹಲವು ಕಡೆಗಳಲ್ಲಿ ಗ್ರಾಹಕರಿಗೆ ಮುಜುಗರ ತಂದದ್ದು ಒಂದೆಡೆಯಾದರೆ, ನೋಟು ನಿಷೇಧ ಬಳಿಕ ಇನ್ನೂ ಚೇತರಿಸಿಕೊಳ್ಳದ ವ್ಯಾಪಾರ- ವಹಿವಾಟುದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು.

ರವಿವಾರದ ಈ ತಾಂತ್ರಿಕ ಸಮಸ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಬ್ಯಾಂಕ್‌ಗಳು, ಕಾರ್ಡ್ ನೆಟ್‌ವರ್ಕ್‌ಗಳು ಹಾಗೂ ಪ್ರೊಸೆಸಿಂಗ್ ಕಂಪೆನಿಗಳು ಪರಸ್ಪರರ ಮೇಲೆ ಗೂಬೆ ಕೂರಿಸುವ ಕಾರ್ಯ ನಡೆದಿದೆ. ಹಲವು ಬ್ಯಾಂಕ್‌ಗಳು ಹೇಳುವಂತೆ ಥರ್ಡ್‌ಪಾರ್ಟಿ ಪ್ರೊಸೆಸರ್, ಅಷ್ಟೊಂದು ಕಾರ್ಯ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದೂರಸಂಪರ್ಕ ಸೇವೆಯಲ್ಲಿ ಆಗಿರುವ ವ್ಯತ್ಯಯ ಕೂಡಾ ಇದಕ್ಕೆ ಕಾರಣ ಎಂದು ಬ್ಯಾಂಕುಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News