×
Ad

ಇದು ಭಾರತ...ಇಲ್ಲಿ ವಾಣಿಜ್ಯಿಕ ಮಾರಾಟಕ್ಕೆ ನಿಷೇಧಿತ ಮಿಲಿಟರಿ ದರ್ಜೆಯ ಸಾಧನಗಳೂ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತವೆ..!

Update: 2016-12-14 15:10 IST

ಹೊಸದಿಲ್ಲಿ,ಡಿ.14: ಕಳೆದ ವರ್ಷ ಪಂಜಾಬ್‌ನಲ್ಲಿ ನಡೆದಿದ್ದ ದಾಳಿ ವೇಳೆ ಭಯೋತ್ಪಾದಕರು ಬಳಸಿದ್ದ ಉಪಕರಣ ಸೇರಿದಂತೆ ನಾಗರಿಕರಿಗೆ ಮಾರಾಟವನ್ನು ನಿಷೇಧಿಸಲಾಗಿರುವ ಮಿಲಿಟರಿ ದರ್ಜೆಯ ಸಾಧನಗಳನ್ನು ಭಾರತದಲ್ಲಿ ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಮುಕ್ತವಾಗಿ ಖರೀದಿಸಬಹುದಾಗಿದೆ. ಆಂಗ್ಲ ಮಾಧ್ಯಮವೊಂದರ ತನಿಖಾ ತಂಡವು ಈ ಆತಂಕಕಾರಿ ಸಂಗತಿಯನ್ನು ಬಯಲಿಗೆಳೆದಿದೆ.

 ಜನಪ್ರಿಯ ಆನ್‌ಲೈನ್ ಮಾರಾಟ ತಾಣವಾಗಿರುವ ಅಮೆಝಾನ್ ಇಂಡಿಯಾ ಮಾರಾಟಕ್ಕಿಟ್ಟಿರುವ ಸರಕುಗಳಲ್ಲಿ ರೈಫಲ್‌ಗಳಿಗೆ ಅಳವಡಿಸುವ ನೈಟ್ ವಿಜನ್ ಟೆಲಿಸ್ಕೋಪಿಕ್ ಸೈಟ್‌ಗಳು, ಹೆಲ್ಮೆಟ್‌ಗಳಿಗೆ ಅಳವಡಿಸುವ ನೈಟ್ ವಿಜನ್ ಗಾಗಲ್‌ಗಳು ಸೇರಿವೆ. ಈ ಉಪಕರಣಗಳ ನೆರವಿನಿಂದ ಕತ್ತಲೆಯಲ್ಲಿಯೂ ನಿಖರವಾಗಿ ಗುರಿಯಿಟ್ಟು ಗಂಡು ಹಾರಿಸಬಹುದಾಗಿದೆ.

ರಾತ್ರಿ ಗೋಚರತೆ ಅಥವಾ ಕತ್ತಲಲ್ಲೂ ವೀಕ್ಷಿಬಹುದಾದ ಸಾಮರ್ಥ್ಯ ಹೊಂದಿರುವ ಗಾಗಲ್‌ಗಳು,ರೈಫಲ್ ಸ್ಕೋಪ್‌ಗಳು ಮತ್ತು ಆಪ್ಟಿಕಲ್ ಸೈಟ್‌ಗಳು ‘ನಿರ್ಬಂಧಿತ ’ವಸ್ತುಗಳಾಗಿದ್ದು, ಇವುಗಳನ್ನು ಸಶಸ್ತ್ರ ಪಡೆಗಳು,ಪೊಲೀಸರು ಮತ್ತು ಸರಕಾರಿ ಸಂಸ್ಥೆಗಳು ಮಾತ್ರ ಬಳಸಬಹುದಾಗಿದೆ ಎಂದು ಭಾರತೀಯ ಕಾನೂನು ಹೇಳುತ್ತದೆ. ಕೇಂದ್ರ ಗೃಹ ಸಚಿವಾಲಯದ ಅನುಮತಿಯಿಲ್ಲದೆ ನಾಗರಿಕರು ಇವುಗಳನ್ನು ಹೊಂದಿದ್ದರೆ ಅಥವಾ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬಹುದಾಗಿದೆ.

ಇಂತಹ ಸಾಧನಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರಕ್ಷಣಾ ಸಚಿವಾಲಯದ ಅಧಿಕಾರಿಯೋರ್ವರು,‘ಮಿಲಿಟರಿ ದರ್ಜೆಯ ರಾತ್ರಿ ಗೋಚರತೆಯ ಸಾಧನ(ಎನ್‌ವಿಡಿ)ಗಳನ್ನು ನಾಗರಿಕರು ಖರೀದಿಸಲು ಅಥವಾ ಬಳಸಲು ಅನುಮತಿ ನೀಡುವ ಯಾವುದೇ ಕಾನೂನಿನ ಬಗ್ಗೆ ನಮಗೆ ಗೊತ್ತಿಲ್ಲ ’ಎಂದು ಉತ್ತರಿಸಿದರು.

 ಸರಕಾರದ ಆಮದು ಪಟ್ಟಿಯಲ್ಲಿ ‘ನಿರ್ಬಂಧಿತ’ ಎಂದು ವರ್ಗೀಕೃತ 428 ವಸ್ತುಗಳಲ್ಲಿ ಎನ್‌ವಿಡಿಗಳು ಸೇರಿವೆ ಎಂದು ಕಸ್ಟಮ್ಸ್ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿ ದರು.

ಆದರೆ ಅಮೆಝಾನ್ ಈ ಸಾಧನಗಳನ್ನು 14,190 ರೂ.ಗಳಿಂದ 2,96,000 ರೂ.ವರೆಗಿನ ಬೆಲೆಗಳಲ್ಲಿ ಮಾರಾಟ ಮಾಡುತ್ತಿದೆ. ಕಡಿಮೆ ಬೆಲೆಯ ಸಾಧನಗಳು ಕ್ಯಾಷ್ ಆನ್ ಡೆಲಿವರಿ ಆಧಾರದಲ್ಲಿ ಲಭ್ಯವಿದ್ದರೆ, ದುಬಾರಿ ಸಾಧನಗಳನ್ನು ಕಂತು ಪಾವತಿಯ ಸೌಲಭ್ಯದ ಮೂಲಕ ಮೂಲಕ ಖರೀದಿಸಬಹುದಾಗಿದೆ.

ಅಮೆಝಾನ್‌ನಲ್ಲಿ ಲಭ್ಯವಿರುವ ಹೆಚ್ಚಿನ ಎನ್‌ವಿಡಿಗಳು ಅಮೆರಿಕಾ ನಿರ್ಮಿತವೆಂದು ಸಂಸ್ಥೆಯು ಹೇಳಿಕೊಳ್ಳುತ್ತಿದೆ. ಕೆಲವು ಸಾಧನಗಳು ಬ್ರಿಟಿಷ್ ಬ್ರಾಂಡ್‌ಗಳ ಹೆಸರುಗಳನ್ನು ಹೊಂದಿದ್ದರೆ,ಇನ್ನುಳಿದ ಸಾಧನಗಳ ಮೂಲವನ್ನು ಉಲ್ಲೇಖಿಸಲಾಗಿಲ್ಲ. ಭಾರತದಲ್ಲಿ ಇವುಗಳ ಸರಾಸರಿ ಮಾರಾಟ ಬೆಲೆ ಅಮೆರಿಕದಲ್ಲಿಯ ಬೆಲೆಗಿಂತ 4 ರಿಂದ 6 ಪಟ್ಟು ಹೆಚ್ಚಾಗಿವೆ. ಕೆಲವೊಂದು ದುಬಾರಿ ಸಾಧನಗಳ ಮೇಲೆ ‘‘ ಕ್ಯಾಲಿಫೋರ್ನಿಯಾ ರಾಜ್ಯ ಮತ್ತು ಅಮೆರಿಕದ ಹೊರಗೆ ಈ ವಸ್ತುವಿನ ಮಾರಾಟವನ್ನು ನಿರ್ಬಂಧಿಸಲಾಗಿದೆ ’’ಎಂಬ ಅಮೆರಿಕ ಸರಕಾರದ ಶಾಸನಬದ್ಧ ಎಚ್ಚರಿಕೆಯನ್ನು ಮುದ್ರಿಸಲಾಗಿದೆ.

 ಎನ್‌ವಿಡಿಗಳು ಯುದ್ಧ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಅತ್ಯಗತ್ಯವಾಗಿವೆ. ಇವುಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿವೆ ಎಂಬ ಸುದ್ದಿ ಆಘಾತಕಾರಿಯಾಗಿದೆ ಎಂದು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆಫ್ಟನೆಂಟ್ ಕರ್ನಲ್ ಓರ್ವರು ಕಳವಳ ವ್ಯಕ್ತಪಡಿಸಿದರು.

2013ರಲ್ಲಿ ಛತ್ತೀಸ್‌ಗಡ ಪೊಲೀಸರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ಯಾಲಿಫೋರ್ನಿಯಾದ ಕಂಪನಿಯೊಂದರಿಂದ ರೈಫಲ್‌ಗಳಿಗಾಗಿ ಎನ್‌ವಿಡಿಗಳನ್ನು ಆಮದು ಮಾಡಿಕೊಂಡಿದ್ದಕ್ಕಾಗಿ ದಿಲ್ಲಿಯ ಕಂಪನಿಯೊಂದರ ನಿರ್ದೇಶಕ ಮತ್ತು ಇತರ ನಾಲ್ವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಬಂಧಿಸಿತ್ತು. ಆರೋಪಿಗಳು ಈ ಸಾಧನಗಳನ್ನು ಮಾವೋವಾದಿ ಗೆರಿಲ್ಲಾಗಳಿಗೆ ಮಾರಾಟ ಮಾಡಿದ್ದರು.

  ಮಾವೋವಾದಿ ಬಂಡುಕೋರರು ಅಮೆರಿಕನ್ ಮೊನೊಕ್ಯುಲರ್‌ಗಳನ್ನು ಬಳಸುತ್ತಾರೆ ಎಂದು ಭದ್ರತಾ ಸಂಸ್ಥೆಗಳು ಹೇಳುತ್ತಿವೆ. ಬೈನಾಕ್ಯುಲರ್ ಎರಡು ಲೆನ್ಸ್‌ಗಳನ್ನು ಹೊಂದಿದ್ದರೆ, ಮೊನೊಕ್ಯುಲರ್ ಒಂದೇ ಲೆನ್ಸ್‌ನ್ನು ಹೊಂದಿರುತ್ತದೆ ಮತ್ತು ಬಂದೂಕು ಅಥವಾ ಪಿಸ್ತೂಲಿನಿಂದ ನಿಖರವಾದ ಗುರಿಯಿಡಲು ಕಣ್ಣಿನ ಎದುರು ಧರಿಸಲಾಗುತ್ತದೆ.

 2015,ಜುಲೈನಲ್ಲಿ ಪಂಜಾಬ್‌ನ ಗುರುದಾಸಪುರದ ದಿನಾನಗರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು ಪಿವಿಎಸ್-14 ಅಮೆರಿಕನ್ ಮೊನೊಕ್ಯುಲರ್‌ಗಳನ್ನು ಬಳಸಿದ್ದರು. ಈ ದಾಳಿಯಲ್ಲಿ ನಾಲ್ವರು ಪೊಲೀಸರು ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದರು. ದಾಳಿಕೋರರು ಸೇನಾ ಸಮವಸ್ತ್ರದಲ್ಲಿ ಬಂದಿದ್ದು, ಭದ್ರತಾ ಪಡೆಗಳೊಂದಿಗಿನ ಸುದೀರ್ಘ ಗುಂಡಿನ ಕಾಳಗದ ಬಳಿಕ ಕೊಲ್ಲಲ್ಪಟ್ಟಿದ್ದರು.

ತನಿಖಾ ಪತ್ರಕರ್ತರು ಅಮೆಝಾನ್ ಇಂಡಿಯಾದ ವಕ್ತಾರರನ್ನು ಸಂಪರ್ಕಿಸಿದಾಗ, ಈ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ. ‘‘ನಿಮ್ಮ ಕಳವಳವನ್ನು ನಾವು ಗಮನಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತೇವೆ. ನಿಮಗೆ ಗೊತ್ತಿರುವ ಹಾಗೆ ಅಮೆಝಾನ್ ಡಾಟ್ ಇನ್ ಮಾರಾಟ ತಾಣವಾಗಿದ್ದು, ಸ್ವತಂತ್ರ ಮಾರಾಟಗಾರರು ಇಲ್ಲಿ ತಮ್ಮ ಉತ್ಪನ್ನಗಳ ಪಟ್ಟಿಗಳನ್ನು ಪ್ರದರ್ಶಿಸುತ್ತಾರೆ. ಸಂಬಂಧಿತ ಮಾರಾಟಗಾರರನ್ನು ಸಂಪರ್ಕಿಸಿ ತಪ್ಪುಗಳಾಗಿದ್ದರೆ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ’’ ಎಂದಿದ್ದಾರೆ.

ಇಂತಹ ಎಷ್ಟು ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗಿವೆ ಎಂಬ ಪ್ರಶ್ನೆಗೆ ತಕ್ಷಣ ಉತ್ತರಿಸುವಲ್ಲಿ ಅವರು ವಿಫಲರಾದರು.

 ಭಾರತದಲ್ಲಿ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಮತ್ತು ಇತರ ಕೆಲವು ಖಾಸಗಿ ಕಂಪನಿಗಳು ಎನ್‌ವಿಡಿಗಳನ್ನು ತಯಾರಿಸುತ್ತಿವೆ. ಭಾರತದಾದ್ಯಂತ ಸುಮಾರು 70 ನೋಂದಾಯಿತ ಖಾಸಗಿ ಏಜೆನ್ಸಿಗಳೂ ಗೃಹ ಸಚಿವಾಲಯದ ಅನುಮತಿಯನ್ನು ಪಡೆದು ಎನ್‌ವಿಡಿಗಳನ್ನು ಆಮದು ಮಾಡಿಕೊಳ್ಳುತ್ತಿವೆ.

ಹೌದು, ನಾವು ರಾತ್ರಿ ಗೋಚರತೆಯ ಬೈನಾಕ್ಯುಲರ್‌ಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಆದರೆ ನಮ್ಮಿಂದ ಅದನ್ನು ಖರೀದಿಸುವ ವ್ಯಕ್ತಿ ಗೃಹ ಸಚಿವಾಲಯದ ಅನುಮತಿ ಹೊಂದಿರಬೇಕು. ಸರಕಾರದ ಅನುಮತಿಯಿಲ್ಲದ ನಾಗರಿಕರಿಗೆ ನಾವು ಇವುಗಳನ್ನು ಮಾರುವಂತಿಲ್ಲ ಎಂದು ದಿಲ್ಲಿಯ ಬೆಟಾರ್ ಕಮ್ಯುನಿಕೇಷನ್ ಸಿಸ್ಟಮ್ಸ್ ಪ್ರೈ.ಲಿ.ನ ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News