ಲೈಂಗಿಕ ಕಿರುಕುಳದ 18 ಆರೋಪ ಹೊತ್ತವನನ್ನು ಸೇವೆಯಲ್ಲೇ ಮುಂದುವರಿಸಿದ್ದ ಶಾಲೆ !

Update: 2016-12-14 12:03 GMT

ಮುಂಬೈ,ಡಿ.14: ಮಹಾರಾಷ್ಟ್ರದ ನೆರುಲ್‌ನಲ್ಲಿರುವ ಎಂಜಿಎಂ ಶಾಲೆ ಭಾರೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಶಿಕ್ಷಕನೋರ್ವನ ವಿರುದ್ಧ 18 ಬಾರಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಗಳಿದ್ದರೂ ಶಾಲೆಯ ಆಡಳಿತವು ಆತನನ್ನು ಸೇವೆಯಲ್ಲಿ ಮುಂದುವರಿಸಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಆಕ್ರೋಶಿತ ಪೋಷಕರು ಶಾಲೆಯೆದುರು ಭಾರೀ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆರೋಪಿ ಹರಿಶಂಕರ ಶುಕ್ಲಾ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ 13ರ ಹರೆಯದ ಬಾಲಕಿಯ ಮೇಲೆ ಎಪ್ರಿಲ್-ಆಗಸ್ಟ್ ಅವಧಿಯಲ್ಲಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಯಾರಲ್ಲೂ ಬಾಯಿಬಿಡದಂತೆ ಆಕೆಗೆ ಬೆದರಿಕೆಯನ್ನೂ ಒಡ್ಡಿದ್ದ. ಬಾಲಕಿ ವಾಂತಿ ಮಾಡಿಕೊಳ್ಳುತ್ತಿದ್ದಾಗ ಗಾಬರಿಗೊಂಡ ಹೆತ್ತವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಆಕೆ ನಾಲ್ಕು ವಾರಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಬಾಲಕಿ ಶಿಕ್ಷಕ ಶುಕ್ಲಾ ತನ್ನ ಮೇಲೆ ಎಸಗಿದ್ದ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟಿದ್ದಳು.

ಸೆ.29 ರಂದು ಬಾಲಕಿಯ ಹೆತ್ತವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಇದಕ್ಕೂ ಮುನ್ನ ಶಾಲಾಡಳಿತಕ್ಕೂ ದೂರು ಸಲ್ಲಿಸಿದ್ದರು. ಅವರು ಮುಂಬೈ ಉಚ್ಚ ನ್ಯಾಯಾಲಯದ ಮೊರೆಯನ್ನೂ ಹೋಗಿದ್ದು,ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಬೆಟ್ಟು ಮಾಡಿರುವ ಅದು, ಹೊಸದಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಲಯ ಡಿಸಿಪಿಗೆ ಆದೇಶಿಸಿದೆ.

ಶುಕ್ಲಾ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ 18 ಪ್ರಕರಣಗಳು ವರದಿಯಾಗಿದ್ದರೂ, ಸೆ.29ರಂದು ಬಾಲಕಿಯ ಹೆತ್ತವರು ದೂರು ಸಲ್ಲಿಸಿದ ಬಳಿಕವೇ ಆತನ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ. ಶುಕ್ಲಾ ಈಗ ತಲೆಮರೆಸಿಕೊಂಡಿದ್ದು,ಆತನ ಮನೆಗೆ ಪೊಲೀಸರು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ಶಿಕ್ಷಕನ ವಿರುದ್ಧ ಅಷ್ಟೆಲ್ಲ ಆರೋಪಗಳಿದ್ದರೂ ಆತನನ್ನು ಸೇವೆಯಲ್ಲಿ ಮುಂದುವರಿಸಿದ್ದ ಶಾಲೆಯ ವಿರುದ್ಧ ಪೋಷಕರ ಆಕ್ರೋಶ ತಾರಕಕ್ಕೇರಿದೆ. ಮಂಗಳವಾರ ಭಾರೀ ಪ್ರತಿಭಟನೆಯೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News