ನೋಟು ರದ್ದತಿ: ಮೋದಿ ಕಡಿಮೆ ಕಲಿತಿರುವುದರಿಂದ ಪರಿಣಾಮ ತಿಳಿಯಲು ವಿಫಲ: ಕೇಜ್ರಿವಾಲ್
ಹೊಸದಿಲ್ಲಿ, ಡಿ.15: ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಪ್ರಧಾನಿ ನರೇಂದ್ರ ಮೋದಿಯವರ ಪದವಿಯ ವಿಚಾರವನ್ನು ಪುನಃ ಎತ್ತಿದ್ದಾರೆ. ಮೋದಿ ಕಡಿಮೆ ಕಲಿತವರಾದುದರಿಂದ ನೋಟು ರದ್ದತಿಯ ‘ವಿನಾಶಕಾರಿ ಪರಿಣಾಮವನ್ನು’ ಅವರಿಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲವೆಂದು ಅವರು ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿಯ ಶೈಕ್ಷಣಿಕ ಪದವಿಗಳ ಕುರಿತಾದ ಸತ್ಯವನ್ನು ‘ಬಹಿರಂಗಪಡಿಸುವುದು’ ಅಗತ್ಯ. ಅದನ್ನು ತಿಳಿಯುವುದು ಜನರ ಮೂಲಭೂತ ಹಕ್ಕಾಗಿದೆ ಎಂದರು.
ಮೋದಿಜಿ ಕಡಿಮೆ ಶಿಕ್ಷಣ ಪಡೆದವರಾದ ಕಾರಣ ಯಾರೊಡನೆಯೂ ಚರ್ಚಿಸದೆ ನೋಟು ರದ್ದತಿಯ ನಿರ್ಧಾರ ಕೈಗೊಂಡಿದ್ದಾರೆ. ಅದೀಗ ಜನರ ಜೀವನವನ್ನೇ ಹಾಳುಗೆಡವಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಧಾನಿಯಿಂದ ಸಾಧ್ಯವಾಗುತ್ತಿಲ್ಲವೆಂದು ಜನರೀಗ ಭಾವಿಸುತ್ತಿದ್ದಾರೆ ಎಂದವರು ತನ್ನ ನಿವಾಸದಲ್ಲಿ ಪತ್ರಕರ್ತರೊಡನೆ ಹೇಳಿದ್ದಾರೆ.
ಜನರು ಠೇವಣಿಯಿರಿಸಿರುವ ಹಣವನ್ನು ರೈತರು ಹಾಗೂ ಸಣ್ಣ ವ್ಯಾಪಾರಿಗಳ ಸಾಲ ಮನ್ನಾಕ್ಕೆ ಬಳಸುವಂತೆ ನೋಟು ರದ್ದತಿಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಕೇಜ್ರಿವಾಲ್ ಆಗ್ರಹಿಸಿದ್ದಾರೆ.