ನೋಟು ರದ್ದತಿ: ಉತ್ತರಪ್ರದೇಶ ಚುನಾವಣೆಯ ಮೇಲೆ ಪರಿಣಾಮದ ಬಗ್ಗೆ ಆರೆಸ್ಸೆಸ್-ಬಿಜೆಪಿ ಸಂಸದರ ಕಳವಳ
ಹೊಸದಿಲ್ಲಿ, ಡಿ.15: ನಗದು ಹಣದ ತೀವ್ರ ಅಭಾವದಿಂದ ಸಾರ್ವಜನಿಕರಲ್ಲಿ ಅಸಮಾಧಾನ ಬೆಳೆಯುತ್ತಿದೆ. ಅದರಿಂದ ಮುಂದಿನ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಕೆಡುಕಾಗಬಹುದೆಂಬ ಎಚ್ಚರಿಕೆಯನ್ನು ಆರೆಸ್ಸೆಸ್ ಹಾಗೂ ಉತ್ತರಪ್ರದೇಶದ ಹಲವು ಬಿಜೆಪಿ ಕಾನೂನು ನಿರ್ಮಾತೃಗಳು ಬಿಜೆಪಿ ನಾಯಕತ್ವವನ್ನು ಎಚ್ಚರಿಸಿದ್ದಾರೆ.
ರೂ.500 ಹಾಗೂ 1000ದ ನೋಟು ರದ್ದುಪಡಿಸುವ ಸರಕಾರದ ಆಘಾತಕಾರಿ ನಿರ್ಧಾರದ ಬಗ್ಗೆ ಹೆಚ್ಚುತ್ತಿರುವ ರಾಜಕೀಯ ಸಮರದ ನಡುವೆ, ಬುಧವಾರ ಲಕ್ನೊ ಹಾಗೂ ದಿಲ್ಲಿಯಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಅವರು ಈ ಕಳವಳವನ್ನು ಎತ್ತಿದ್ದಾರೆ.
ಸೆ.29ರಂದು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿಯಿಂದಾಗಿ ಪಕ್ಷದ ಕಡೆಗೆ ಜನರ ಒಲವು ಗೋಚರವಾಗಿತ್ತು. ಆದರೆ, ನೋಟು ರದ್ದತಿಯಿಂದ ಅದು ಹಿಮ್ಮುಖವಾಗುವ ಸಾಧ್ಯತೆಯಿದೆಯೆಂದು ಸುಮಾರು 25ರಷ್ಟು ಬಿಜೆಪಿ ಸಂಸದರು ಪಕ್ಷಾಧ್ಯಕ್ಷ ಅಮಿತ್ ಶಾಗೆ ತಿಳಿಸಿದ್ದಾರೆ.
ಲಕ್ನೊದ ಸಂಸದ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಸಂಜೆ ದಿಲ್ಲಿಯಲ್ಲಿ ಏರ್ಪಡಿಸಿದ್ದ ಭೋಜನ ಕೂಟವೊಂದರಲ್ಲಿ ಶಾ, ಉತ್ತರಪ್ರದೇಶದ 36 ಸಂಸದರನ್ನು ಭೇಟಿಯಾಗಿದ್ದರು.
ಶಾ, ಸರ್ಜಿಕಲ್ ದಾಳಿ, ನೋಟು ರದ್ದತಿ ಹಾಗೂ ನಡೆಯುತ್ತಿರುವ, ಪಕ್ಷದ ಪರಿವರ್ತನ್ ಯಾತ್ರಾಗಳ ಹಿನ್ನೆಲೆಯಲ್ಲಿ ವಾಸ್ತವ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದರೆಂದು ಸಭೆಯಲ್ಲಿ ಭಾಗವಹಿಸಿದ ಸಂಸದರೊಬ್ಬರು ಎಚ್‌ಟಿಗೆ ತಿಳಿಸಿದ್ದಾರೆ.
ಹಣದ ನಿಯಂತ್ರಿತ ಹರಿವು, ಅದರಿಂದ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಉದ್ದವಾದ ಸರತಿಯ ಸಾಲುಗಳ ಬಗ್ಗೆ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯ ಕಳವಳವು ಆರೆಸ್ಸೆಸ್ ಸಂಯೋಜಿತ ಲಘು ಉದ್ಯೋಗ ಭಾರತಿ ಸಂಘಟನೆ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರ ವೇಳೆ ನಡೆದ ಸುಮಾರು 60 ಮಂದಿ ಕೈಗಾರಿಕೋದ್ಯಮಿಗಳ ಪ್ರತ್ಯೇಕ ಸಭೆಯೊಂದರಲ್ಲೂ ಎತ್ತಲ್ಪಟ್ಟಿವೆ.
ತಾವು ನಗದು ಹಣವಿಲ್ಲದೆ ಒಂದು ದಿನವನ್ನೂ ಕಳೆಯಲಾರೆವು. ಹಾಲಿ ಪರಿಸ್ಥಿತಿಯ ಅಧಿಕಾರಿಗಳಿಗೆ ಅತಿಯಾದ ಅಧಿಕಾರವನ್ನು ನೀಡಿದೆ. ಅದರಿಂದಾಗಿ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತದ’ ಭರವಸೆಗೆ ವಿರುದ್ಧವಾಗಿದೆಯೆಂದು ಅವರು ವಾದಿಸಿದ್ದಾರೆ.
ಪ್ರಸಕ್ತ ಪರಿಸ್ಥಿತಿ ತಮಗೆ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕಾದ ಅನಿವಾರ್ಯವನ್ನು ನಿರ್ಮಿಸಲಿವೆ. ಅದರಿಂದ ನಿರುದ್ಯೋಗ ಹೆಚ್ಚಲಿದೆಯೆಂದು ಉದ್ಯಮಿಗಳು ಆರೆಸ್ಸೆಸ್ ನಾಯಕರು ಹಾಗೂ ಕೇಂದ್ರದ ಸಹಾಯಕ ವಿತ್ತ ಸಚಿವ ಅರ್ಜುನ್ ರಾಮ್ ಮೇಘ್ವಾಲ್‌ರಲ್ಲಿ ದೂರಿದ್ದಾರೆ.