×
Ad

ನೋಟು ರದ್ದತಿ: ರಾಷ್ಟ್ರಪತಿಗೆ ದೂರು ನೀಡಲು ವಿಪಕ್ಷ ನಿರ್ಧಾರ

Update: 2016-12-15 20:32 IST

ಹೊಸದಿಲ್ಲಿ, ಡಿ.14: ನೋಟು ರದ್ದತಿಯ ವಿರುದ್ಧದ ತಮ್ಮ ಪ್ರತಿಭಟನೆಯನ್ನು ರಾಷ್ಟ್ರಪತಿಯ ಬಾಗಿಲಿಗೊಯ್ಯಲು ವಿಪಕ್ಷಗಳಿಂದು ನಿರ್ಧರಿಸಿವೆ. ಈ ಕ್ರಮದಿಂದ ಜನಸಾಮಾನ್ಯರಿಗಾಗಿರುವ ಸಮಸ್ಯೆ ಹಾಗೂ ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದ ಕುರಿತು ದೂರು ನೀಡಲು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಲು ಅವು ಬಯಸಿವೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್‌ರ ಕೊಠಡಿಯಲ್ಲಿ ನಡೆದ ಸಭೆಯೊಂದರಲ್ಲಿ, ನೋಟು ರದ್ದತಿಯಿಂದ ಬಡವರು ಹಾಗೂ ರೈತರು ಸಹಿತ ಜನಸಾಮಾನ್ಯರಿಗಾಗಿರುವ ತೊಂದರೆಯನ್ನು ರಾಷ್ಟ್ರಪತಿಯ ಬಳಿ ಪ್ರಸ್ತಾವಿಸಲು ವಿವಿಧ ಪಕ್ಷಗಳ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.

 ತಮಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲವೆಂದು ಆಳುವ ಪಕ್ಷದ ವಿರುದ್ಧ ‘ದೂರು ನೀಡಲು’ ರಾಷ್ಟ್ರಪತಿಯ ಬಳಿಗೆ ತೆರಳಲು ಸಂಪೂರ್ಣ ವಿಪಕ್ಷವು ನಿರ್ಧರಿಸಿದೆಯೆಂದು ವಿವಿಧ ವಿಪಕ್ಷಗಳ ನಾಯಕರು ತಿಳಿಸಿದ್ದಾರೆ.

ರಾಷ್ಟ್ರಪತಿಯಲ್ಲಿ ನಾಳೆ ಭೇಟಿಗೆ ಸಮಯಾವಕಾಶ ಕೇಳಲಾಗಿದೆ. ಎಲ್ಲ ವಿಪಕ್ಷಗಳು ಒಗ್ಗಟ್ಟಿನಿಂದ ಅವರ ಮುಂದೆ ವಿಷಯ ಎತ್ತಲು ಸಿದ್ಧವಾಗಿವೆ. ರೈತರು ಹಾಗೂ ಜನಸಾಮಾನ್ಯರ ಸಂಕಷ್ಟದ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲೂ ಪ್ರಸ್ತಾವಿಸಿ, ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ಅವು ಸಭೆಯಲ್ಲಿ ನಿರ್ಧರಿಸಿವೆಯೆಂದು ಮೂಲಗಳು ಹೇಳಿವೆ.

ಕಾಂಗ್ರೆಸ್, ಟಿಎಂಸಿ, ಬಿಎಸ್ಸಿ, ಎಸ್ಸಿ, ಜೆಡಿಯು, ಸಿಪಿಐ, ಸಿಪಿಎಂ, ಎನ್‌ಸಿಪಿ, ಡಿಎಂಕೆ ಹಾಗೂ ಎಐಯುಡಿಎಫ್ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News