ಫಿಫಾ ಕ್ಲಬ್ ವಿಶ್ವಕಪ್: ರಿಯಲ್ ಮ್ಯಾಡ್ರಿಡ್ ಫೈನಲ್‌ಗೆ

Update: 2016-12-16 04:48 GMT

ಯಕೊಹಮ(ಜಪಾನ್), ಡಿ.15: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲಿಸಿದ 500ನೆ ಕ್ಲಬ್ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ.

ಸ್ಪೇನ್‌ನ ದೈತ್ಯ ಫುಟ್ಬಾಲ್ ಕ್ಲಬ್ ಮ್ಯಾಡ್ರಿಡ್ ತಂಡ ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಕಾಶಿಮಾ ಅಂಟ್ಲೆರ್ಸ್‌ ತಂಡವನ್ನು ಎದುರಿಸಲಿದೆ. ಮ್ಯಾಡ್ರಿಡ್ ತಂಡ ಮೂರು ವರ್ಷಗಳಲ್ಲಿ 2ನೆ ಹಾಗೂ ಒಟ್ಟಾರೆ 5ನೆ ಬಾರಿ ಪ್ರಶಸ್ತಿ ಜಯಿಸಲು ಎದುರು ನೋಡುತ್ತಿದೆ.

ಗುರುವಾರ ರಾತ್ರಿ ಇಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಮೆಕ್ಸಿಕೊ ಕ್ಲಬ್ ಅಮೆರಿಕ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಕರೀಮ್ ಬೆಂಝಮಾ ಹಾಗೂ ರೊನಾಲ್ಡೊ ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಮ್ಯಾಡ್ರಿಡ್ ಕ್ಲಬ್ ಎಲ್ಲ ಟೂರ್ನಿಗಳಲ್ಲಿ ಸತತ 36 ಗೆಲುವು ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

‘‘ಫೈನಲ್ ತಲುಪುವುದು ನಮ್ಮ ಏಕೈಕ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮೊದಲಾರ್ಧದಲ್ಲಿ ನಮ್ಮ ತಂಡ ಹೆಚ್ಚು ಲಯ ಕಂಡುಕೊಂಡಿರಲಿಲ್ಲ. ದ್ವಿತೀಯಾರ್ಧದಲ್ಲಿ ಹೆಚ್ಚು ಅವಕಾಶವನ್ನು ಸೃಷ್ಟಿಸಿತು. ರೊನಾಲ್ಡೊ ತಂಡಕ್ಕೆ ಗೆಲುವು ತಂದುಕೊಟ್ಟರು. ತಂಡದ ಈ ಪ್ರದರ್ಶನ ನನಗೆ ಖುಷಿಕೊಟ್ಟಿದೆ’’ ಎಂದು ಮ್ಯಾಡ್ರಿಡ್ ತಂಡದ ಕೋಚ್ ಝೈನುದ್ದೀನ್ ಝೈದಾನ್ ಹೇಳಿದ್ದಾರೆ.

ಇದೇ ವೇಳೆ 31ರ ಹರೆಯದ ರೊನಾಲ್ಡೊ ಕ್ಲಬ್ ಫುಟ್ಬಾಲ್‌ನಲ್ಲಿ 500ನೆ ಗೋಲು ಬಾರಿಸಿದರು. ರಿಯಲ್ ಪರ 366 ಪಂದ್ಯಗಳಲ್ಲಿ 377 ಗೋಲುಗಳು, ಮ್ಯಾಂಚೆಸ್ಟರ್ ಯುನೈಟೆಡ್ ಪರ 292 ಪಂದ್ಯಗಳಲ್ಲಿ 118 ಗೋಲುಗಳು ಹಾಗೂ ಸ್ಪೋರ್ಟಿಂಗ್ ಕ್ಲಬ್ ಪರ ಆಡಿರುವ 31 ಪಂದ್ಯಗಳ ಪೈಕಿ 5 ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News