×
Ad

ಈಗ ಪೇಟಿಎಂ ಗೇ ಪಂಗನಾಮ !

Update: 2016-12-16 18:57 IST

ಹೊಸದಿಲ್ಲಿ, ಡಿ.16: ಇಲ್ಲಿನ ಕೆಲವು ಗ್ರಾಹಕರು ತನಗೆ ರೂ.6.15 ಲಕ್ಷದಷ್ಟು ವಂಚನೆ ಮಾಡಿದ್ದಾರೆಂದು ಡಿಜಿಟಲ್ ವ್ಯಾಲೆಟ್ ಪೇಟಿಎಂ ನೀಡಿದ ದೂರಿನನ್ವಯ ಸಿಬಿಐ ಕೆಲವು ಗ್ರಾಹಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ಅಥವಾ ಹೈಕೋರ್ಟೊಂದರ ನಿರ್ದೇಶನದ ಹೊರತಾಗಿ ತನಿಖೆ ಸಂಸ್ಥೆಯು ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದು ವಿರಳ.

ಕಲ್ಕಾಜಿ, ಗೋವಿಂದಪುರಿ ಹಾಗೂ ಸಾಕೇತ ನಿವಾಸಿಗಳಾದ 15 ಮಂದಿ ಗ್ರಾಹಕರು ಹಾಗೂ ಪೇಟಿಎಂನ ಮಾತೃಸಂಸ್ಥೆ ವನ್ 97 ಕಮ್ಯುನಿಕೇಶನ್ಸ್‌ನ ಅಜ್ಞಾತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿದೆ.

ಕಂಪೆನಿಯು ಗ್ರಾಹಕರು ಪಡೆದ ದೋಷಪೂರಿತ ಉತ್ಪನ್ನಗಳಿಗೆ ಹಣ ಪಾವತಿ ಮಾಡುತ್ತದೆ ಹಾಗೂ ಅಂತಹ ಉತ್ಪನ್ನವನ್ನು ಹಿಂದೆ ಪಡೆದು ವ್ಯಾಪಾರಿಗೆ ಕಳುಹಿಸುತ್ತದೆ. ಈ ಕೆಲಸ ಗ್ರಾಹಕ ಕ್ಷೇಮ ಕಾರ್ಯವಾಹಿಗಳ ತಂಡವೊಂದು ನಡೆಸುತ್ತಿದ್ದು, ಸದಸ್ಯರಿಗೆಲ್ಲ ಇದಕ್ಕಾಗಿ ನಿರ್ದಿಷ್ಟ ಗುರುತು ಪತ್ರ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಲಾಗುತ್ತದೆಂದು ಸಂಸ್ಥೆಯ ಕಾನೂನು ಪ್ರಬಂಧಕ ಎಂ. ಶಿವಕುಮಾರ್ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಗ್ರಾಹಕರಿಗೆ ಆದೇಶ ನೀಡಿದ ಉತ್ಪನ್ನಗಳನ್ನು ಯಶಸ್ವಿಯಾಗಿ ಬಟವಾಡೆ ಮಾಡಿದ್ದರೂ 48 ಮಂದಿ ಗ್ರಾಹಕರು ಹಣ ಮರುಪಾವತಿ ಪಡೆದಿರುವುದನ್ನು ಕಂಪೆನಿ ಪತ್ತೆ ಮಾಡಿದೆಯೆಂದು ಅದು ತಿಳಿಸಿದೆ.

 ವಾಸ್ತವದಲ್ಲಿ ಗ್ರಾಹಕರ ಆದೇಶಗಳು ಯಶಸ್ವಿಯಾಗಿ ಹಾಗೂ ತೃಪ್ತಿಕರವಾಗಿ ಬಟವಾಡೆಯಾಗಿರುವಾಗ ಹಿಂಪಾವತಿ ನಡೆಯಬಾರದಿತ್ತು. ಆದರೆ ಈ 48 ಪ್ರಕರಣಗಳಲ್ಲಿ ಗ್ರಾಹಕರಿಗೆ ರೂ.6.15 ಲಕ್ಷದಷ್ಟು ಮರು ಪಾವತಿಯಾಗಿದೆ. ಗ್ರಾಹಕರು ಮರುಪಾವತಿಸಲಾದ ಹಣವನ್ನು ತಮ್ಮ ಬ್ಯಾಂಕ್ ಖಾತೆ ಹಾಗೂ ವ್ಯಾಲೆಟ್‌ಗಳಲ್ಲಿ ಕಾನೂನುಬಾಹಿರವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ದುರ್ಲಾಭ ಪಡೆಯುವ ಉದ್ದೇಶದಿಂದಲೇ ಕೆಲವು ಗ್ರಾಹಕರು ಈ ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಈ ವಂಚನೆ 2015-16ರಲ್ಲಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News