ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಟ್ಯೂಶನ್ ಅಧ್ಯಾಪಕನ ಬಂಧನ
ಕೋಯಮತ್ತೂರ್,ಡಿ. 17: ಧರ್ಮಪುರಿ ಎಂಬಲ್ಲಿನ ಟ್ಯೂಶನ್ ಸೆಂಟರ್ ನೆಪವಾಗಿಟ್ಟು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮಪುರಿ ಪಾಲಕ್ಕೋಟ್ ಎಂಬಲ್ಲಿನ ನಿವಾಸಿ ಎಸ್. ಶಿವಕುಮಾರ್(25) ಪೊಲೀಸರ ವಶವಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಮೂರುವರ್ಷ ಮೊದಲು ಪಾಲಕ್ಕೋಟ್ ಮತ್ತು ನಂತರ ಧರ್ಮಪುರಿ ನಗರದಲ್ಲಿ ಟೂಶನ್ ಸೆಂಟರ್ ನಡೆಸುತ್ತಿದ್ದನು ಎನ್ನಲಾಗಿದೆ.
ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನು ವೀಡಿಯೊ ಮಾಡಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಕೆ. ಈಶ್ವರನ್(26), ಪಿ. ಶಿವಕುಮಾರ್(27) ಎಂಬವರನ್ನು ಕೂಡಾ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇವರು ಶಿವಕುಮಾರ್‌ನ ಗೆಳೆಯರಾಗಿದ್ದು, ಇವರ ವಿರುದ್ಧ ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬ ಸದಸ್ಯರು ದೂರು ನೀಡಲು ಹಿಂಜರಿದಿದ್ದು ಇವರ ದುಷ್ಕೃತ್ಯಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಪ್ರಸಾರವಾದಾಗ ಕೆಲವರು ಪೊಲೀಸರಿಗೆ ದೂರು ನೀಡಲು ಮುಂದೆ ಬಂದಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಈತ ತನ್ನ ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳಿಗೆ ರಿಮಾಂಡ್ ವಿಧಿಸಲಾಗಿದೆ.