×
Ad

ಇಲ್ಲಿ ವಾಹನಗಳು ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಚಲಿಸುತ್ತವೆ!

Update: 2016-12-17 17:53 IST

ಮುಂಬೈ,ಡಿ.17: ಕಾರೊಂದು ಇಳಿಜಾರು ರಸ್ತೆಯಲ್ಲಿ ನ್ಯೂಟ್ರಲ್‌ನಲ್ಲಿ ಚಲಿಸಿದರೆ ಏನಾಗುತ್ತದೆ..? ಅದು ಗುರುತ್ವಾಕರ್ಷಣೆಯ ಬಲದಿಂದ ಚಲಿಸುತ್ತದೆ. ಹೌದು ತಾನೇ?

ಆದರೆ ಮುಂಬೈ ಮಹಾನಗರದ ಹೃದಯಭಾಗದಲ್ಲಿರುವ ಗುಡ್ಡಪ್ರದೇಶದಲ್ಲಿಯ ಫ್ಲೈ ಓವರ್‌ನಲ್ಲಿ ಮಾತ್ರ ಈ ತತ್ತ್ವ ಸುಳ್ಳಾಗುತ್ತಿದೆ.

ಜೋಗೇಶ್ವರಿ-ವಿಕ್ರೋಲಿ ಲಿಂಕ್ ರೋಡ್‌ಗೆ ಸ್ವಲ್ಪವೇ ಮೊದಲು ಸೀಪ್ಝ್ ಬಳಿ ಕಾರನ್ನು ನ್ಯೂಟ್ರಲ್‌ನಲ್ಲಿ ಬಿಡಿ...ಅದು ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಹಿಂದಕ್ಕೆ ಎಳೆಯಲ್ಪಡುತ್ತದೆ.

 ‘ಗ್ರಾವಿಟಿ ಹಿಲ್ ’ಎಂದು ಕರೆಯಲಾಗುವ ಇಂತಹ ನಿಗೂಢ ತಾಣಗಳು ವಿಶ್ವಾದ್ಯಂತ ಹಲವಾರು ಕಡೆಗಳಲ್ಲಿವೆ. ಈ ಪೈಕಿ ಹೆಚ್ಚಿನವು ಪ್ರವಾಸಿ ತಾಣಗಳಾಗಿ ಪ್ರಚಾರ ಪಡೆದಿದ್ದು ಕೆಲವು ಕಡೆಗಳಲ್ಲಿ ಪ್ರವೇಶ ಶುಲ್ಕವನ್ನೂ ವಿಧಿಸಲಾಗುತ್ತಿದೆ. ಆದರೆ ಮುಂಬಯಿಗರ ಮೂಗಿನ ಅಡಿಯಲ್ಲಿಯೇ ಇರುವ, ಪ್ರತಿದಿನ ಸಾವಿರಾರು ಜನರು ಸಂಚರಿಸುವ ಈ ಸಂಚಾರ ನಿಬಿಡ ರಸ್ತೆಯ ಈ ನಿಗೂಢತೆ ಮುಂಬೈಯ ಕಣ್ಣಿಗೆ ಬೀಳದ ಕೌತುಕಗಳಲ್ಲಿ ಒಂದಾಗಿದೆ. ಆದರೆ ಇದು ಹೆಚ್ಚಿನವರಿಗೆ ಗೊತ್ತೇ ಇಲ್ಲ, ಆದರೆ ಈ ಕೌತುಕಕ್ಕೆ ವಿವರಣೆಯಂತೂ ಇದೆ.

ಇಲ್ಲಿಯ ಗುಡ್ಡದ ಇಳಿಜಾರು ರಸ್ತೆಯಲ್ಲಿ ಕಾರು ಹಿಂದಕ್ಕೆ ಚಲಿಸುವುದು ಹೇಗೆ? ನಿಜಕ್ಕೂ ಇಂತಹ ನಿಗೂಢ ತಾಣಗಳು ಭೌತಶಾಸ್ತ್ರದ ನಿಯಮಗಳಿಗೆ ವಿರುದ್ಧವಾಗಿವೆಯೇ?

ಇಂತಹ ತಥಾಕಥಿತ ‘ಆಯಸ್ಕಾಂತೀಯ ಗುಡ್ಡ ’ಗಳು ದೃಷ್ಟಿ ಭ್ರಮೆಯಿಂದಾಗಿ ಅನುಭವಕ್ಕೆ ಬರುವ ಸಾಮಾನ್ಯ ವಿದ್ಯಮಾನಗಳಾಗಿವೆ. ಸ್ವಲ್ಪ ಇಳಿಜಾರಿನಲ್ಲಿ ನ್ಯೂಟ್ರಲ್‌ನಲ್ಲಿರುವ ಕಾರು ಹಿಂದಕ್ಕೆ ಚಲಿಸುತ್ತಿರುವಂತೆ ಕಾಣುತ್ತದೆ ಮತ್ತು ಇದಕ್ಕೆ ಆ ಸ್ಥಳದ ವಿನ್ಯಾಸ ಕ್ಷಿತಿಜಕ್ಕೆ ಅಡ್ಡಿಯನ್ನುಂಟು ಮಾಡುವುದರಿಂದ ಇಂತಹ ಭ್ರಮೆಗಳು ಉಂಟಾಗುತ್ತವೆ ಎಂದು ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ.ಲೇಖಾ ನಾಯರ್ ವಿವರಿಸಿದರು.

  ಅಂದರೆ ನಿಸರ್ಗವೇ ಅಲ್ಲದ್ದನ್ನು ನಂಬುವಂತೆ ನಮ್ಮ ಮಿದುಳನ್ನು ವಂಚಿಸುತ್ತದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ ಅವರು, ಸಮತಲ ದಿಗಂತವಿಲ್ಲದಿದ್ದಾಗ ಮೇಲ್ಮೈಯೊಂದರ ಇಳಿಜಾರನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ರಸ್ತೆಯ ವಿನ್ಯಾಸ ಮತ್ತು ಹಿನ್ನೆಲೆ ಮೇಲ್ಮುಖ ಇಳಿಜಾರು ಇದೆಯೆಂಬ ಭ್ರಮೆಯನ್ನು ಮೂಡಿಸುತ್ತದೆ, ಆದರೆ ವಾಸ್ತವದಲ್ಲಿ ಆ ಇಳಿಜಾರು ಕೆಳಮುಖವಾಗಿರುತ್ತದೆ. ಹೀಗಾಗಿ ಕಾರು ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಹಿಂದಕ್ಕೆ ಚಲಿಸುತ್ತಿದೆ ಎಂದು ಅನ್ನಿಸುತ್ತದೆ, ಆದರೆ ಅದು ಗುರುತ್ವಾಕರ್ಷಣ ಶಕ್ತಿಯೊಂದಿಗೆ ಮುಂಕ್ಕೆಯೇ ಚಲಿಸುತ್ತಿರುತ್ತದೆ ಎಂದರು.

ಪೆನ್ಸಿಲ್ವೇನಿಯಾ ಸ್ಟೇಟ್ ಯುನಿವರ್ಸಿಟಿ ನಡೆಸಿರುವ ಇನ್ನೊಂದು ಅಧ್ಯಯನವೂ ಇಂತಹುದೇ ವಿವರಣೆಯನ್ನು ನೀಡಿದೆ. ತಾಣದ ಸುತ್ತಲಿನ ಮರಗಳು ಮತ್ತು ಇಳಿಜಾರುಗಳು ಇರುವ ಸ್ಥಿತಿ ಅಥವಾ ಕಣ್ಣುಗಳಿಗೆ ಮೋಸವನ್ನುಂಟು ಮಾಡುವ ತಿರುವಿನಿಂದ ಕೂಡಿದ ದಿಗಂತ ರೇಖೆಯು ಇಂತಹ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಅದು ಹೇಳಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News