ಸಿಂಧು ನದಿ ಒಪ್ಪಂದ ಕುರಿತು ಉನ್ನತ ಮಟ್ಟದ ಕಾರ್ಯಪಡೆ
ಹೊಸದಿಲ್ಲಿ,ಡಿ.17: ಪಾಕಿಸ್ತಾನೊಂದಿಗಿನ ಸಿಂಧು ಜಲ ಒಪ್ಪಂದದ ಎಲ್ಲ ವ್ಯೆಹಾತ್ಮಕ ಮಗ್ಗಲುಗಳನ್ನು ಪರಿಶೀಲಿಸಲು ಸರಕಾರವು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಅಂತರ್ ಸಚಿವಾಲಯ ಕಾರ್ಯಪಡೆಯನ್ನು ರಚಿಸಿದೆ.
ಸಮಿತಿಯ ಸದಸ್ಯರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ವಿತ್ತ,ಪರಿಸರ,ವಿದ್ಯುತ್ ಮತ್ತು ಜಲ ಸಂಪನ್ಮೂಲ ಸಚಿವಾಲಯಗಳ ಕಾರ್ಯದರ್ಶಿಗಳು ಸೇರಿದ್ದಾರೆ.
ಸಿಂಧು ವ್ಯವಸ್ಥೆಯ ಭಾಗವಾಗಿರುವ ಆರು ನದಿಗಳು ಹರಿಯುವ ಜಮ್ಮು-ಕಾಶ್ಮೀರ, ಮತ್ತು ಪಂಜಾಬ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಕಾರ್ಯಪಡೆಯಲ್ಲಿ ಆಹ್ವಾನಿತ ರಾಗಿರುತ್ತಾರೆ.
ಉರಿ ದಾಳಿ ಸೇರಿದಂತೆ ಗಡಿಯಾಚೆಯಿಂದ ಸರಣಿ ಭಯೋತ್ಪಾದಕ ದಾಳಿಗಳು ನಡೆದ ಬಳಿಕ ಪಾಕಿಸ್ತಾನದೊಂದಿಗಿನ, 56 ವರ್ಷಗಳಷ್ಟು ಹಳೆಯದಾದ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಪುನರ್ ಪರಿಶೀಲಿಸಲು ಪ್ರಧಾನಿಯವರು ಸುಮಾರು ಮೂರು ತಿಂಗಳುಗಳ ಹಿಂದೆ ಸಭೆಯೊಂದನ್ನು ನಡೆಸಿದ್ದರು. ಝೇಲಂ ಸೇರಿದಂತೆ ಪಾಕ್ ನಿಯಂತ್ರಣದಲ್ಲಿರುವ ನದಿಗಳಿಂದ ಗರಿಷ್ಠ ನೀರನ್ನು ಬಳಸಿಕೊಳ್ಳಲು ಆ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಎಲ್ಲ ಪ್ರಮುಖ ವ್ಯೆಹಾತ್ಮಕ ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಈ ಉನ್ನತಮಟ್ಟದ ಕಾರ್ಯಪಡೆಗೆ ನೀಡಲಾಗಿದೆ. ಒಪ್ಪಂದಕ್ಕೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ಅದು ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.