×
Ad

ಸೆ.16ರ ಒಳಗೆ ಜಿಎಸ್‌ಟಿ ಮಸೂದೆ ಅನುಷ್ಠಾನ: ಅರುಣ್ ಜೇಟ್ಲೀ

Update: 2016-12-17 20:50 IST

ಹೊಸದಿಲ್ಲಿ, ಡಿ.17: ಸಾಂವಿಧಾನಿಕ ಬಾಧ್ಯತೆಯ ಕಾರಣ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ)ಯನ್ನು 2017ರ ಎಪ್ರಿಲ್ 1ರಿಂದ ಸೆಪ್ಟೆಂಬರ್ 16ರ ಒಳಗೆ ಅನುಷ್ಠಾನಗೊಳಿಸಬೇಕಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ತಿಳಿಸಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಫಿಕಿ)ಯ 89ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಸೂದೆ ಅನುಷ್ಠಾನದ ಬಗ್ಗೆ ಇರುವ ಕಗ್ಗಂಟನ್ನು ನಿವಾರಿಸಲು ಪ್ರಯತ್ನ ಸಾಗುತ್ತಿದೆ ಎಂದು ತಿಳಿಸಿದರು.

       ಸಾಂವಿಧಾನಿಕ ಕಾಯ್ದೆ 2016ರ ಪ್ರಕಾರ 2017ರ ಸೆಪ್ಟೆಂಬರ್ 16ರ ಒಳಗೆ ಜಿಎಸ್‌ಟಿ ಕಾಯ್ದೆ ಅನುಷ್ಠಾನಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಆ ದಿನಾಂಕದ ಬಳಿಕ ಪ್ರಸ್ತುತ ಇರುವ ತೆರಿಗೆ ಪದ್ದತಿಗೆ ತೆರೆ ಬೀಳಲಿದೆ ಮತ್ತು ಹೊಸ ನಿಯಮದಂತೆ ತೆರಿಗೆ ಪದ್ದತಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನುಸರಿಸಲಿವೆ . ಇದನ್ನು ಬೇಗ ಅನುಷ್ಠಾನಕ್ಕೆ ತಂದರೆ ಹೊಸ ತೆರಿಗೆ ಪದ್ದತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯಾವಕಾಶ ಸಿಕ್ಕಂತಾಗುತ್ತದೆ ಎಂದವರು ಹೇಳಿದರು. ಕೇಂದ್ರ ಜಿಎಸ್‌ಟಿ, ಸಮಗ್ರ ಜಿಎಸ್‌ಟಿ ಮತ್ತು ಆದಾಯ ನಷ್ಟವಾದ ಸಂದರ್ಭ ರಾಜ್ಯಗಳಿಗೆ ದೊರಕುವ ಪರಿಹಾರ ಮೊತ್ತದ ಬಗ್ಗೆ ಮಸೂದೆ ರಚಿಸಲಾಗುತ್ತಿದ್ದು ಇದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯಬೇಕಿದೆ. ಅಂಗೀಕಾರ ದೊರಕುವ ಭರವಸೆಯಿದೆ. ತೆರಿಗೆದಾರರ ಮೇಲೆ ಯಾರು ನಿಯಂತ್ರಣ ಹೊಂದಿರಬೇಕು ಎಂಬುದು ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಚರ್ಚೆಯ ವಿಷಯವಾಗಿದೆ. ಈ ವಿಷಯದ ಬಗ್ಗೆ ಶೀಘ್ರ ನಿರ್ಧಾರಕ್ಕೆ ಬರಲಾಗುವುದು ಎಂದು ಜೇಟ್ಲೀ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News