×
Ad

ಕಾರ್ಮಿಕನ ಖಾತೆಯಲ್ಲಿ 1 ಕೋಟಿ ರೂ. ಜಮೆ ಅಕ್ಷರ ತಪ್ಪು ಕಾರಣ: ಬ್ಯಾಂಕ್ ಸ್ಪಷ್ಟೀಕರಣ

Update: 2016-12-17 21:02 IST

ಭೋಪಾಲ, ಡಿ.17: ನೀವು 2016ರ ನವೆಂಬರ್ 9ರಿಂದ ನ.17ರವರೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 1 ಕೋಟಿ ಹತ್ತು ಸಾವಿರ ರೂ. ಹಣ ಜಮೆ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ವ್ಯವಹಾರದ ವೇಳೆ ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್) ನಂಬರ್ ನಮೂದಿಸಿಲ್ಲ. ಈ ವ್ಯವಹಾರದ ಕುರಿತು ತಕ್ಷಣ ವಿವರಣೆ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಬಂದಾಗ ಆ ಬಡ ಕೂಲಿ ಕಾರ್ಮಿಕನಿಗೆ ಆಕಾಶವೇ ತಲೆಮೇಲೆ ಬಿದ್ದಂತಾಯಿತು.

ಅಸಲಿಗೆ ಆ ನೋಟಿಸ್ ಇಂಗ್ಲಿಷ್‌ನಲ್ಲಿದ್ದ ಕಾರಣ ಆತನಿಗೆ ಅದರ ತಲೆಬುಡ ಅರ್ಥವಾಗಲಿಲ್ಲ. ಬಳಿಕ ಗ್ರಾಮದ ಶಿಕ್ಷಕರೋರ್ವರು ಅದರ ಅರ್ಥ ಬಿಡಿಸಿ ಹೇಳಿದಾಗ ಆತ ಕಂಗಾಲಾಗಿ ಬಿಟ್ಟ.

ಅಸಾರಾಮ್ ವಿಶ್ವಕರ್ಮ ಎಂಬ ಹೆಸರಿನ ಈ ಕೂಲಿ ಕಾರ್ಮಿಕ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯ ಖಡಿಯಾ ನಗರದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಖಾತೆಯೊಂದನ್ನು ಹೊಂದಿದ್ದ. ಬಹು ಸಮಯದಿಂದ ನಿಷ್ಕ್ರಿಯವಾಗಿದ್ದ ಆ ಖಾತೆಯಲ್ಲಿ ಏಕಾಏಕಿ 1 ಕೋಟಿ 10 ಸಾವಿರ ಮೊತ್ತ ಜಮೆ ಆಗಿರುವುದಾಗಿ ದಾಖಲೆಗಳಲ್ಲಿ ನಮೂದಿಸಲ್ಪಟ್ಟಿದೆ.

 ಬರವಣಿಗೆ ವೇಳೆ ಆಗಿರುವ ತಪ್ಪು ಇದಕ್ಕೆ ಕಾರಣ. ಅಸಾರಾಮ್ 10 ಸಾವಿರ ರೂ. ಖಾತೆಗೆ ಜಮೆ ಮಾಡಿದ್ದ. ಆದರೆ ಖಾತೆಯಲ್ಲಿ ನಮೂದಿಸುವಾಗ 1 ಕೋಟಿ 10 ಸಾವಿರ ಎಂದು ತಪ್ಪಾಗಿ ಬರೆಯಲಾಗಿದೆ ಎಂದು ಬ್ಯಾಂಕ್‌ನ ಮ್ಯಾನೇಜರ್ ವಿನೋದ್ ಜಲೋಡಿಯಾ ತಿಳಿಸಿದ್ದಾರೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಇಂತಹ ಅನುಮಾನಾಸ್ಪದ ವ್ಯವಹಾರಗಳ ಉಲ್ಲೇಖವಿರುವ 1 ಸಾವಿರಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳು ಬೆಳಕಿಗೆ ಬಂದಿದ್ದು, ಇವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News