ನೋಟು ಬದಲಾವಣೆ ಪ್ರಕರಣ: ಸಿಬಿಐನಿಂದ ಇಬ್ಬರು ಆರ್‌ಬಿಐ ಅಧಿಕಾರಿಗಳ ಬಂಧನ
ಹೊಸದಿಲ್ಲಿ,ಡಿ.17: 1.99 ಕೋ.ರೂ.ಗಳ ಹಳೆಯ ನೋಟುಗಳನ್ನು 2,000 ಮತ್ತು 100 ರೂ.ನೋಟುಗಳಿಗೆ ಬದಲಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಆರ್‌ಬಿಐ ಕಚೇರಿಯ ನಗದು ವಿಭಾಗದ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.
ಹಿರಿಯ ವಿಶೇಷ ಸಹಾಯಕ ಸದಾನಂದ ನಾಯ್ಕ ಮತ್ತು ವಿಶೇಷ ಸಹಾಯಕ ಎ.ಕೆ.ಕೆವಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ನಾಲ್ಕು ದಿನಗಳ ಸಿಬಿಐ ಕಸ್ಟಡಿ ವಿಧಿಸಿದೆ.
ಬಂಧಿತ ಆರೋಪಿಗಳು ಮತ್ತು ಆರ್‌ಬಿಐನ ಇತರ ಅಪರಿಚಿತ ಅಧಿಕಾರಿಗಳು ನೋಟು ಬದಲಾವಣೆಗಾಗಿ ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ಕ್ರಿಮಿನಲ್ ಒಳಸಂಚು ನಡೆಸಿದ್ದ ಆರೋಪವಿದೆ ಎಂದು ಸಿಬಿಐ ವಕ್ತಾರೆ ದೇವಪ್ರೀತ್ ಸಿಂಗ್ ತಿಳಿಸಿದರು.
ಆರ್‌ಬಿಐ ವಿಧಿಸಿದ್ದ ವಿನಿಮಯ ಮಿತಿಗಳನ್ನು ಉಲ್ಲಂಘಿಸಿ ಆರೋಪಿಗಳು ಹೊಸನೋಟುಗಳನ್ನು ಹಳೆಯ ನೋಟುಗಳಿಗೆ ಬದಲಿಸಿದ್ದರು ಎಂದರು. ಎಸ್‌ಬಿಎಂನ ಅಧಿಕಾರಿಗಳ ಮೇಲೆ ತನ್ನ ಪ್ರಭಾವವನ್ನು ಬೀರಿ ಆರು ಲ.ರೂ.ಗೂ ಅಧಿಕ ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಆರ್‌ಬಿಐನ ಇನ್ನೋರ್ವ ಅಧಿಕಾರಿ ಮೈಕಲ್‌ನನ್ನು ಸಿಬಿಐ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ.