ತರ್ಲೆ ವಿಲೇಜ್: ತಿಥಿಯ ಗುಂಗಿನಲ್ಲಿದ್ದವರಿಗೆ ಮುಜುಗರ

Update: 2016-12-17 18:58 GMT

ಗ್ರಾಮೀಣ ಬದುಕಿಗೆ ಕನ್ನಡಿಯಿಟ್ಟ ‘ತಿಥಿ’ ಚಿತ್ರ, ಸ್ಯಾಂಡಲ್‌ವುಡ್‌ಗೆ ಹೊಸ ಲವಲವಿಕೆ ಯನ್ನು ತಂದುಕೊಟ್ಟಿತ್ತು. ಆ ಚಿತ್ರದ ಸೆಂಚುರಿಗೌಡ, ಗಡ್ಡಪ್ಪ, ಅಭಿ ಪಾತ್ರಗಳನ್ನು ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ. ಇದೇ ಪಾತ್ರಗಳನ್ನು ‘ತರ್ಲೆ ವಿಲೇಜ್’ಗೆ ನಿರ್ದೇಶಕ ಕೆ.ಎಂ.ರಘು ಮತ್ತೆ ಎಳೆದುತಂದಿದ್ದಾರೆ. ಆದರೆ ತಿಥಿಯ ಪರಮಾನ್ನವನ್ನು ಉಂಡ ಪ್ರೇಕ್ಷಕ ಅದೇ ಗುಂಗಿನಲ್ಲಿ ತರ್ಲೆ ವಿಲೇಜ್‌ಗೆ ಬಂದಾಗ ಆತನಿಗೆ ಸಪ್ಪೆ ಊಟ ಉಂಡ ಅನುಭವ ಗ್ಯಾರಂಟಿ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಒಂದು ಹಳ್ಳಿಯಲ್ಲಿ ನಡೆಯುವ ತರಲೆ ಸಂಗತಿಗಳನ್ನು ಹದವಾಗಿ ಬೆರೆಸಿ ಬೆಳ್ಳಿತೆರೆಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕೆ.ಎಂ.ರಘು. ಇದರ ಜೊತೆಗೆ ಜನರನ್ನು ಕಾಡುವ ಮೂಢನಂಬಿಕೆ,ಚುನಾವಣೆ, ಊರಿನ ಸಮಸ್ಯೆ, ಪರಸ್ತ್ರೀ ವ್ಯಾಮೋಹ ಇವೆಲ್ಲವೂ ತರ್ಲೆವಿಲೇಜ್‌ನಲ್ಲಿ ಬೆರೆತುಹೋಗಿವೆ. ಚಿತ್ರದುದ್ದಕ್ಕೂ ಪೋಲಿ ಸಂಭಾಷಣೆಗಳನ್ನು ಯಥೇಚ್ಛವಾಗಿ ತುರುಕಲಾಗಿದ್ದು, ಕುಟುಂಬ ಸಮೇತರಾಗಿ ಚಿತ್ರನೋಡಲು ಬಂದವರಿಗೆ ಮುಜುಗರ ತಪ್ಪಿದ್ದಲ್ಲ.

ತಿಥಿ ಸಿನೆಮಾದ ನಂಜಪ್ಪ (ಸೆಂಚುರಿಗೌಡ),ಗಡ್ಡಪ್ಪ, ಅಭಿ ಹೀಗೆ ಎಲ್ಲರೂ ‘‘ತರ್ಲೆ ವಿಲೇಜ್’’ ನಲ್ಲಿಯೂ ಕಾಣಸಿಗುತ್ತಾರೆ. ಆದರೆ ಈ ಯಾವ ಪಾತ್ರಗಳಿಗೂ ತಿಥಿ ಚಿತ್ರದ ಪಾತ್ರಗಳೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ‘ತರ್ಲೆ ವಿಲೇಜ್’ ಚಿತ್ರವು ಒಂದು ಹಲವು ಕಥೆಗಳ ಸಂಕಲನದಂತಿದೆ. ಈ ಹಳ್ಳಿಯಲ್ಲಿ ಒಂದೊಂದು ಹುಣ್ಣಿಗೆ ಸಂಭವಿಸುವ ನಿಗೂಢ ಸಾವುಗಳು ಗ್ರಾಮಸ್ಥರನ್ನು ಭಯಭೀತಗೊಳಿಸುತ್ತದೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಇಡೀ ಚಿತ್ರದಲ್ಲಿ ತರ್ಲೆ ಸನ್ನಿವೇಶಗಳೇ ತುಂಬಿವೆ. ತಮ್ಮಣ್ಣನ ಪರಸ್ತ್ರೀ ಸಹವಾಸ, ಹುಡುಗಿಯರ ಜೊತೆ ಪೋಲಿಯಾಟವಾಡುವ ಅಭಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವೋಟಿಗಾಗಿ ನಡೆಯುವ ಕುತಂತ್ರಗಳು, ಊರಿನಲ್ಲಿ ಎದು ರಾಗುವ ಎಲ್ಲ ಸಮಸ್ಯೆಗಳಿಗೂ ಊರವರನ್ನೇ ನಿಂದಿಸುವ ಸೆಂಚುರಿ ಗೌಡ(ಸಿಂಗ್ರಿ ಗೌಡ), ಅವನಿಗೆ ಸಮಾಧಾನ ಹೇಳುವ ಗಡ್ಡಪ್ಪ  (ತಮ್ಮೇಗೌಡ) ಜೊತೆಗೆ ಭೂತ, ಪ್ರೇತ ಮೂಢನಂಬಿಕೆಗಳು. ಹೀಗೆ ಸಾಮಾನ್ಯವಾಗಿ ಒಂದು ಹಳ್ಳಿಯಲ್ಲಿ ಏನೇನು ಇರುತ್ತೋ ಅದೆಲ್ಲವನ್ನೂ ತೆರೆಯಲ್ಲಿ ತೋರಿಸಲು ನಿರ್ದೇಶಕರು ಹರಸಾಹಸಪಟ್ಟಿದ್ದಾರಾದರೂ,ನಿರೂಪಣೆ ಬಿಗಿಯಿಲ್ಲದ ಕಾರಣ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ.

ಇಡೀ ಚಿತ್ರದ ಕಥೆಯು ಈ ಸಸ್ಪೆನ್ಸ್‌ನೊಂದಿಗೆ ಮುಂದೆ ಸಾಗುತ್ತದೆ. ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಅವರ ನಡುವಿನ ಸಂಭಾಷಣೆಗಳೇ ಚಿತ್ರದ ಪ್ಲಸ್‌ಪಾಯಿಂಟ್. ಆದರೆ ಸೆಂಚುರಿಗೌಡನ ಬಾಯಲ್ಲಿ ಉದುರುವ ಪೋಲಿ ಸಂಭಾಷಣೆಗಳು, ಶುದ್ಧವಾದ ಮನರಂಜನೆಯನ್ನು ಬಯಸಿ ಬಂದವರನ್ನು ಮುಜುಗರಕ್ಕೀಡು ಮಾಡುವುದಂತೂ ಖಂಡಿತ. ‘ತಿಥಿ’ ಚಿತ್ರದಲ್ಲಿ ಶತಾಯುಷಿ ಸೆಂಚುರಿ ಗೌಡ ಸತ್ತ ಬಳಿಕ ಆತನ ಕುಟುಂಬದಲ್ಲಿ ಆಸ್ತಿಗಾಗಿ ನಡೆಯುವ ಕಿತ್ತಾಟದ ಕಥೆಯನ್ನು ಹೇಳುತ್ತದೆ. ಆ ಕಥೆಯನ್ನೇ ಕೇಂದ್ರಬಿಂದು ವಾಗಿಟ್ಟುಕೊಂಡು ನಿರ್ದೇಶಕರು ಇಡೀ ಗ್ರಾಮದ ಬದುಕನ್ನು ತೆರೆಯ ಮೇಲೆ ಮೂಡಿ ಸುವಲ್ಲಿ ಸಫಲರಾಗಿದ್ದರು. ಆದರೆ ತರ್ಲೆ ವಿಲೇಜ್‌ನಲ್ಲಿ ಹಲವು ಕಥೆಗಳ ತುಣುಕು ಗಳನ್ನು ಒಟ್ಟು ಪೋಣಿಸಿ, ಒಂದು ಚಿತ್ರ ಮಾಡಿದಂತೆ ಭಾಸವಾಗುತ್ತದೆ. ‘ದಲ್ಲಾಳಿ’ ಪಾತ್ರದಲ್ಲಿ ತಮ್ಮಣ್ಣನ ನೈಜ ಅಭಿನಯ ನೋಡುಗರನ್ನು ಮುದಗೊಳಿಸುತ್ತದೆ. ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವ ತಮ್ಮಣ್ಣ ಚಿತ್ರದ ಇನ್ನೊಂದು ವಿಶೇಷ ಆಕರ್ಷಣೆಯಾಗಿದ್ದಾರೆ. ಅಭಿಷೇಕ್‌ಗೆ ತಿಥಿಯಲ್ಲಿದ್ದ ಅಭಿ ಕ್ಯಾರೆಕ್ಟರನ್ನೇ ಹೋಲುವ ಪಾತ್ರವು ತರ್ಲೆ ವಿಲೇಜ್‌ನಲ್ಲಿಯೂ ಸಿಕ್ಕಿದೆ.

ತರ್ಲೆವಿಲೇಜ್‌ನಲ್ಲಿ ನಿರ್ದೇಶಕ ರಘು ನೈಜ ಸಂಭಾಷಣೆಗೆ ಹೆಚ್ಚು ಒತ್ತು ಕೊಡಲಾಗಿದ್ದು, ಅಲ್ಲಲ್ಲಿ ಪಂಚಿಂಗ್ ಡೈಲಾಗ್‌ಗಳು ಗಮನಸೆಳೆಯುತ್ತವೆ. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತೆ ಪೋಲಿ ಸಂಭಾಷಣೆಗಳು ಮುಜುಗರವನ್ನುಂಟು ಮಾಡುತ್ತವೆ.

ನಿರ್ದೇಶಕ ಕೆ.ಎಂ.ರಘು ಚೊಚ್ಚಲ ಯತ್ನದಲ್ಲೇ ಭರವಸೆ ಮೂಡಿಸುತ್ತಾರೆ. ಸಿನೆಮಾದಲ್ಲಿ ಗ್ರಾಮೀಣ ಜೀವನದ ನೈಜತೆಗಳನ್ನು ಅಚ್ಚುಕಟ್ಟಾಗಿ ಪ್ರತಿಬಿಂಬಿಸುವಲ್ಲಿ ಅವರು ಸಫಲರಾಗಿದ್ದಾರೆ. ಈ ಯುವ ನಿರ್ದೇಶಕನಿಂದ ಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದಾಗಿದೆ. ಚಿತ್ರದಲ್ಲಿ ಹಾಡುಗಳಿಲ್ಲವಾದರೂ, ಆ ಕೊರತೆಯು ಪ್ರೇಕ್ಷಕರನ್ನು ಬಾಧಿಸುವುದಿಲ್ಲ. ಹಿನ್ನೆಲೆ ಸಂಗೀತ ಕೂಡಾ ಚಿತ್ರದ ಕಥೆಗೆ ಪೂರಕವಾಗಿದೆ. ಛಾಯಾಗ್ರಹಣದಲ್ಲಿ ವಿಶೇಷತೆಯೇನೂ ಇಲ್ಲ. ಸಂಕಲನ ಇನ್ನಷ್ಟು ಹರಿತವಾಗಿರಬೇಕಿತ್ತು.

ತಿಥಿ ಚಿತ್ರವನ್ನು ನೀವು ನೋಡಿರದೆ ಇದ್ದಲ್ಲಿ, ತರ್ಲೆ ವಿಲೇಜ್‌ನ ಕೆಲವು ಸನ್ನಿವೇಶಗಳು ನಿಮಗೆ ಇಷ್ಟವಾಗಲೂಬಹುದು. ಆದರೆ ತಿಥಿ ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ, ತರ್ಲೆ ವಿಲೇಜ್ ನೋಡಿ ಹೊರಬಂದ ಬಳಿಕ, ‘ತಿಥಿ’ ಎಷ್ಟು ಅದ್ಭುತವಾಗಿತ್ತು ಎಂಬ ಭಾವನೆ ಬಾರದೆ ಇರದು.

ಮಾಮೂಲಿ ಸ್ಯಾಂಡಲ್‌ವುಡ್ ಚಿತ್ರಗಳಿಗಿಂತ ಭಿನ್ನ ದಾಟಿಯಲ್ಲಿರುವ ತರ್ಲೆವಿಲೇಜ್‌ನಲ್ಲಿ ಮನರಂಜನೆಗೇನೂ ಕೊರತೆಯಿಲ್ಲ. ಆದರೆ ಕುಟುಂಬ ಸಮೇತರಾಗಿ ಹೋಗುವ ಮೊದಲು ಎರಡು ಬಾರಿ ಯೋಚಿಸುವುದೊಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News