ಆಸ್ಪತ್ರೆಯಿಂದಲೇ ವಿಧವೆಗೆ ಸಹಾಯಹಸ್ತ ಚಾಚಿದ ಸುಷ್ಮಾ
ಹೊಸದಿಲ್ಲಿ,ಡಿ.18: ಮೂತ್ರಪಿಂಡ ವೈಫಲ್ಯದಿಂದಾಗಿ ಕಳೆದ ಒಂದು ತಿಂಗಳಿಗೂ ಅಧಿಕ ಅವಧಿಗೆ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಅಲ್ಲಿಂದಲೇ ನಾಗರಿಕರ ಸಂಕಷ್ಟಗಳಿಗೆ ಸ್ಪಂದಿಸುವುದನ್ನು ಮುಂದುವರಿಸಿದ್ದಾರೆ.ರವಿವಾರ ಅವರು ಇತ್ತೀಚಿಗೆ ಜಪಾನಿನಲ್ಲಿ ತನ್ನ ಪತಿಯನ್ನು ಕಳೆದುಕೊಂಡಿರುವ ವಿಧವೆಗೆ ನೆರವಾಗಿದ್ದಾರೆ.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಶನಿವಾರ ಸುಷ್ಮಾರಿಗೆ ಪತ್ರವೊಂದನ್ನು ಬರೆದು,ಮೃತವ್ಯಕ್ತಿಯ ಶವವನ್ನು ಭಾರತಕ್ಕೆ ತರಲು ನೆರವಾಗುವಂತೆ ಕೋರಿಕೊಂಡಿದ್ದರು. ರವಿವಾರ ಪತ್ರವನ್ನು ಓದಿದ ಸುಷ್ಮಾ ಮಲಿವಾಲ್ ಅವರನ್ನು ಸಂಪರ್ಕಿಸಿ,‘‘ನಾವು ಎಲ್ಲ ಖರ್ಚನ್ನೂ ಭರಿಸುತ್ತೇವೆ ಮತ್ತು ಈ ಕಾರ್ಯವನ್ನು ತಕ್ಷಣವೇ ಮಾಡಿ’’ ಎಂದು ತಿಳಿಸಿದರು.
ಗೋಪಾಲ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಜಪಾನಿಗೆ ತೆರಳಿ ಅಲ್ಲಿಯ ಹೋಟೆಲ್‌ವೊಂದರಲ್ಲಿ ಅಡಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಅವರ ಸಹೋದ್ಯೋಗಿ ಯೋರ್ವ ಡಿ.10ರಂದು ಗೋಪಾಲರ ಕುಟುಂಬವನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಮತ್ತು ಗೋಪಾಲ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ.
ಗೋಪಾಲರ ಪತ್ನಿ ಅಂತ್ಯಸಂಸ್ಕಾರ ನೆರವೇರಿಸಲು ತನ್ನ ಪತಿಯ ಶವವನ್ನು ಭಾರತಕ್ಕೆ ತರಲು ನೆರವು ಕೋರಿ ಮಹಿಳಾ ಆಯೋಗದ ಮೊರೆ ಹೋಗಿದ್ದಳು. ತಾನು ಆರ್ಥಿಕವಾಗಿ ದುರ್ಬಲಳಾಗಿದ್ದು, ಪತಿಯ ಶವವನ್ನು ತಾಯ್ನೆಡಿಗೆ ತರಲು ಹಣವನ್ನು ಖರ್ಚು ಮಾಡುವ ಸ್ಥಿತಿಯಲ್ಲಿಲ್ಲ ಎಂದು ಆಕೆ ತನ್ನ ಸಂಕಟವನ್ನು ತೋಡಿಕೊಂಡಿದ್ದಳು.
ಡಿ.11ರಂದು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಸುಷ್ಮಾ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.