×
Ad

ಡಯಾಲಿಸಿಸ್‌ನಲ್ಲಿರುವ ರ್ಯಾಗಿಂಗ್ ಬಲಿಪಶು

Update: 2016-12-18 16:25 IST

ತ್ರಿಶೂರು,ಡಿ.18: ಕೊಟ್ಟಾಯಂ ಸರಕಾರಿ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್‌ಗೊಳಗಾಗಿದ್ದ 22ರ ಹರೆಯದ ಕಿರಿಯ ವಿದ್ಯಾರ್ಥಿಯ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಹೀಗಾಗಿ ಆತನನ್ನು ಇಲ್ಲಿಯ ಮದರ್ ಹಾಸ್ಪಿಟಲ್‌ನಲ್ಲಿ ಡಯಾಲಿಸಿಸ್‌ಗೊಳಪಡಿಸಲಾಗಿದೆ. ರ್ಯಾಗಿಂಗ್‌ಗೆ ಗುರಿಯಾಗಿದ್ದ ಇನ್ನೋರ್ವ ವಿದ್ಯಾರ್ಥಿಯನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿ.2ರಂದು ರಾತ್ರಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳು ತನ್ನನ್ನು ಮತ್ತು ಇತರ ಎಂಟು ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಐದು ಗಂಟೆಗಳಿಗೂ ಹೆಚ್ಚು ಕಾಲ ತಮ್ಮಿಂದ ವಿವಿಧ ಕಠಿಣ ವ್ಯಾಯಾಮಗಳನ್ನು ಮಾಡಿಸಿದ್ದರು ಎಂದು ತ್ರಿಶೂರು ಆಸ್ಪತ್ರೆಯಲ್ಲಿರುವ ಒ.ಎಸ್.ಅವಿನಾಶ್ ಹೇಳಿದ್ದಾರೆ.

ಅವಿನಾಶ್‌ನ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಡಾ.ಅಬ್ದುಲ್ ಶಿಜಿ ತಿಳಿಸಿದರು.
 ಅವಿನಾಶ್‌ಗೆ ಈಗಾಗಲೇ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗಿದ್ದು, ಆತನ ದೇಹಸ್ಥಿತಿ ಈಗ ಉತ್ತಮಗೊಂಡಿದೆ ಎಂದರು.

 ಗಂಟೆಗಳ ಕಾಲ ವ್ಯಾಯಾಮ ಮಾಡಿ ನಾವು ಸುಸ್ತಾಗಿದ್ದೆವು. ನಮ್ಮಲ್ಲಿ ಕೆಲವರು ಕುಸಿದು ಬಿದ್ದರೂ ಅವರು ಬಿಡಲಿಲ್ಲ. ನೆಲದ ಮೇಲೆ ಈಜುತ್ತಿರುವಂತೆ ನಟಿಸಲು ನಮಗೆ ಹೇಳಲಾಗಿತ್ತು.ನಮ್ಮಲ್ಲಿ ಕೆಲವರನ್ನು ರೂಮೊಂದರಲ್ಲಿ ಕೂಡಿ ಹಾಕಿ ಹಾಡುವಂತೆ ಅವರು ಆದೇಶಿಸಿದ್ದರು. ಇದೆಲ್ಲ ಚಿತ್ರಹಿಂಸೆ ಐದು ಗಂಟೆಗಳ ಕಾಲ, ಬೆಳಗಿನ ಜಾವದವರೆಗೂ ನಡೆದಿತ್ತು ಎಂದು ಅವಿನಾಶ್ ಅಂದಿನ ಕರಾಳ ರಾತ್ರಿಯನ್ನು ನೆನಪಿಸಿಕೊಂಡರು.

ಮರುದಿನವೇ ಹುಟ್ಟೂರು ತ್ರಿಶೂರಿಗೆ ಮರಳಿದ ಅವಿನಾಶ್ ತೀವ್ರ ಅಸ್ವಸ್ಥಗೊಂಡಿದ್ದರು ಮತ್ತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನ್ನ ಮಗನ ಮೇಲೆ ರ್ಯಾಗಿಂಗ್ ನಡೆದಿತ್ತು ಎನ್ನುವುದು ಅವಿನಾಶ್ ತಂದೆಗೆ ಆತನ ಸ್ನೇಹಿತರು ದೂರವಾಣಿ ಮೂಲಕ ತಿಳಿಸಿದಾಗಲೇ ಗೊತ್ತಾಗಿದ್ದು. ತಕ್ಷಣ ಅವರು ಪೊಲೀಸ್ ದೂರು ದಾಖಲಿಸಿದ್ದರು.

ಅವಿನಾಶ ದಲಿತ ಕುಟುಂಬಕ್ಕೆ ಸೇರಿದ್ದು,ಹೆತ್ತವರಿಗೆ ಹೇಳಿಕೊಳ್ಳುವಂತಹ ಆದಾಯವಿಲ್ಲ.

ನನ್ನದು ಸಣ್ಣ ಕೆಲಸ,ಸಂಬಳ ಕಡಿಮೆ. ಮಗನ ವ್ಯೆದ್ಯಕೀಯ ವೆಚ್ಚವನ್ನು ಭರಿಸಲೂ ನನ್ನಿಂದ ಸಾಧ್ಯವಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ಇಂತಹ ಘಟನೆ ಪುನರಾವರ್ತನೆಯಾಗಕೂಡದು ಎಂದು ಒ.ಪಿ.ಶಿವದಾಸನ್ ಹೇಳಿದರು.

ರ್ಯಾಗಿಂಗ್ ನಡೆಸಿದ್ದ ಎಲ್ಲ ಒಂಬತ್ತೂ ಹಿರಿಯ ವಿದ್ಯಾರ್ಥಿಗಳು ತಲೆಮರೆಸಿ ಕೊಂಡಿದ್ದಾರೆ. ಪೊಲೀಸರು ಅವರ ಮನೆಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ. ಆದರೆ ಅವರಿನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.

ಆರೋಪಿಗಳ ವಿರುದ್ಧ ಕೊಲೆ ಯತ್ನ, ರ್ಯಾಗಿಂಗ್ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಕೊಟ್ಟಾಯಂನ ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News