ಹುಚ್ಚಾಸ್ಪತ್ರೆಯಿಂದ ಕೊಲೆ ಆರೋಪಿ ಪರಾರಿ
Update: 2016-12-18 17:09 IST
ಅಹ್ಮದಾಬಾದ್,ಡಿ.18: ಪಟನ್ ಜಿಲ್ಲೆಯ ಮಧುಪುರಲ್ಲಿರುವ ಸರಕಾರಿ ಮಾನಸಿಕ ರೋಗಗಳ ಆಸ್ಪತ್ರೆಯಲ್ಲಿ ಮಾನಸಿಕ ವೈಕಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿ ಪರಾರಿಯಾಗಿದ್ದಾನೆ.
ತನ್ನ ಹೆತ್ತತಾಯಿಯನ್ನೇ ಕೊಲೆಗೈದಿದ್ದ ಆರೋಪಿ ಪ್ರಹ್ಲಾದ್ ಠಾಕೂರ್(35)ನನ್ನು ಪಟನ್ ಜಿಲ್ಲಾ ನ್ಯಾಯಾಲಯದ ನಿರ್ದೇಶದ ಮೇರೆಗೆ 2016,ಅ.20ರಿಂದ ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಶನಿವಾರ ರಾತ್ರಿ ತನ್ನನ್ನು ಕಾಯುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಚಳ್ಳೆಹಣ್ಣು ತಿನ್ನಿಸಿ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವಲ್ಲಿ ಠಾಕೂರ್ ಯಶಸ್ವಿಯಾಗಿದ್ದಾನೆ.
ಪಟನ್ ಜಿಲ್ಲೆಯ ಉಮ್ರಾವು ಗ್ರಾಮದ ನಿವಾಸಿಯಾದ ಠಾಕೂರ್ 2015,ನ.7ರಂದು ತನ್ನ ಹೊಲದಲ್ಲಿ ತಾಯಿ ಸಂಜನಾಬೆನ್‌ರನ್ನು ಕೊಲೆ ಮಾಡಿದ್ದ. ಪಟನ್ ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆತನಲ್ಲಿ ಮಾನಸಿಕ ಅಸ್ವಸ್ಥತೆ ತಲೆದೋರಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.