ರಾಮಾಯಣದ ಶೂರ್ಪನಖಿ ನಿಜಕ್ಕೂ ಮಾಯಗಾತಿಯೇ ಅಥವಾ ಬಲಿಪಶುವೇ?
ಹೊಸದಿಲ್ಲಿ,ಡಿ.18: ರಾಮಾಯಣದಲ್ಲಿ ಲಂಕಾಧಿಪತಿ ರಾವಣನ ತಂಗಿ ಶೂರ್ಪನಖಿಯ ಬಗ್ಗೆ ತಿಳಿಯದವರಾರು? ಲಕ್ಷ್ಮಣ ತನ್ನನ್ನು ಮೋಹಿಸಿದ್ದ ಇದೇ ಶೂರ್ಪನಖಿಯ ಮೂಗನ್ನು ತುಂಡರಿಸಿದ್ದ ಮತ್ತು ರಾಮ ಮತ್ತು ರಾವಣರ ನಡುವಿನ ಯುದ್ಧಕ್ಕೆ ಈಕೆಯೇ ಕಾರಣಕರ್ತಳು ಎನ್ನಲಾಗುತ್ತದೆ. ಆದರೆ ರಾಮಾಯಣದಲ್ಲಿ ಚಿತ್ರಿಸಿರುವಂತೆ ಆಕೆ ನಿಜಕ್ಕೂ ಮಾಯಗಾತಿ ಹೆಂಗಸಾಗಿದ್ದಳೇ..?
ಪೌರಾಣಿಕ ಕೃತಿಗಳ ಲೇಖಕಿ ಕವಿತಾ ಕಾಣೆ ಅವರು ತನ್ನ ಇತ್ತೀಚಿನ ‘ಲಂಕಾದ ರಾಜಕುಮಾರಿ ’ ಕೃತಿಯಲ್ಲಿ ಶೂರ್ಪನಖಿಯನ್ನು ಖಳನಾಯಕಿಯಂತೆ ಚಿತ್ರಿಸಿರುವ ವಾಲ್ಮೀಕಿಯ ಕಲ್ಪನೆಗೆ ವಿರುದ್ಧವಾದ ಚಿತ್ರಣವನ್ನು ನೀಡಿದ್ದಾರೆ.
ಶೂರ್ಪನಖಿಯ ಮನೋಸ್ಥಿತಿಯ ಬಗ್ಗೆ ಗಾಢಚಿಂತನೆಯನ್ನು ನಡೆಸಿರುವ ಕಾಣೆ ತನ್ನ ಕೃತಿಯಲ್ಲಿ ಆಕೆಯನ್ನು ಮಾನವಜೀವಿಯೊಂದಿಗೆ ಸಮೀಕರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.
ಎಲ್ಲ ರಾಮಾಯಣಗಳಲ್ಲೂ ಶೂರ್ಪನಖಿಯ ಒಂದೇ ಬಗೆಯ ಚಿತ್ರಣವಿದೆ. ನಾನು ಅದನ್ನು ಮೀರಲು ಬಯಸಿದ್ದೆ. ಲಕ್ಷ್ಮಣ ಆಕೆಯ ಮೂಗನ್ನು ತುಂಡರಿಸಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ರಾಮಾಯಣದಲ್ಲಿಯ ಅತ್ಯಂತ ಹಿಂಸಾತ್ಮಕ ಅಧ್ಯಾಯವೆಂದು ನಾನು ಭಾವಿಸಿದ್ದೇನೆ. ಆದರೆ ಅವಳಿಗೆ ಏನೇ ಆಗಿದ್ದರೂ ಅದು ಅವಳ ಸ್ವಂತ ಕೃತ್ಯಗಳಿಂದಲೇ ಆಗಿತ್ತೇ? ಆಕೆ ಮಾಯಗಾತಿಯಾಗಿದ್ದಳೇ ಅಥವಾ ಬಲಿಪಶು ವಾಗಿದ್ದಳೇ? ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ ಇಡೀ ದೃಷ್ಟಿಕೋನವೇ ಬದಲಾಗಿಬಿಡುತ್ತದೆ ಎಂದು ಪುಣೆ ಮೂಲದ ಕಾಣೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.
ಕಾಣೆಯವರ ಗಮನವನ್ನು ಸೆಳೆದಿದ್ದು ಶೂರ್ಪನಖಿಯ ಹೆಸರು. ಮತ್ತು ಇದರಿಂದಾಗಿಯೇ ಅವರು ಇತಿಹಾಸವನ್ನು ಕೆದಕಿ ಆಕೆಯ ಪಾತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟ್ದಿದ್ದಾರೆ.
ಅನಾಕರ್ಷಕ ಮತ್ತು ಘೋರರೂಪದ ಹೆಣ್ಣಾಗಿ ಸಾಂಪ್ರದಾಯಿಕವಾಗಿ ಬಿಂಬಿಸಲ್ಪ ಟ್ಟಿರುವ ಶೂರ್ಪನಖಿಯ ಕಣ್ಣುಗಳು ಮೀನಿನ ಕಣ್ಣುಗಳನ್ನು ಹೋಲುತ್ತಿದ್ದ ಕಾರಣಕ್ಕಾಗಿ ಆಕೆಯ ಮೂಲ ಹೆಸರು ಮೀನಾಕ್ಷಿ ಎಂದಾಗಿತ್ತು.
ಹೀಗಿರುವಾಗ ಚೂಪಾದ ಮತ್ತು ಉದ್ದನೆಯ ನಖಗಳನ್ನು ಹೊಂದಿರುವವಳು ಎಂಬ ಅರ್ಥವನ್ನು ನೀಡುವ,ದುಷ್ಟಶಕ್ತಿಗಳೊಂದಿಗೆ ಗುರುತಿಸಿಕೊಂಡಿರುವಂತಹ ಈ ಶೂರ್ಪನಖಿ ಎಂಬ ಹೆಸರು ಆಕೆಗೆ ಬಂದಿದ್ದಾದರೂ ಹೇಗೆ? ಕಾಣೆ ತನ್ನ ಕೃತಿಯಲ್ಲಿ ಇದಕ್ಕೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.