ಬ್ಯಾಂಕುಗಳಲ್ಲಿ 5,000 ರೂ.ಗಿಂತ ಹೆಚ್ಚಿನ ಹಳೆಯ ನೋಟುಗಳ ಠೇವಣಿಗೆ ಡಿ.30ರವರೆಗೆ ಒಂದು ಬಾರಿ ಮಾತ್ರ ಅವಕಾಶ
ಹೊಸದಿಲ್ಲಿ,ಡಿ.19: ಬ್ಯಾಂಕ್ ಖಾತೆಗಳಲ್ಲಿ 5,000 ರೂ.ಗೂ ಹೆಚ್ಚಿನ ಹಳೆಯ ನೋಟುಗಳ ಠೇವಣಿಯ ಮೇಲೆ ಸೋಮವಾರ ಹೊಸ ನಿರ್ಬಂಧವನ್ನು ಹೇರಿರುವ ಆರ್‌ಬಿಐ, ಇಂತಹ ಠೇವಣಿಗೆ ಡಿ.30ರವರೆಗೆ ಒಮ್ಮೆ ಮಾತ್ರ ಅವಕಾಶವಿದೆ ಎಂದು ಹೇಳಿದೆ. ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ನೀಡಿರುವ ಗಡುವು ಡಿ.30ಕ್ಕೆ ಅಂತ್ಯಗೊಳ್ಳುತ್ತದೆ. ಈ ಮೊದಲು ಏಕೆ ಜಮಾ ಮಾಡಿಲ್ಲ ಎನ್ನುವುದಕ್ಕೆ ಗ್ರಾಹಕರು ಬ್ಯಾಂಕಿನ ಇಬ್ಬರು ಅಧಿಕಾರಿಗಳಿಗೆ ತೃಪ್ತಿಕರ ಉತ್ತರ ನೀಡಿದ ಬಳಿಕವೇ 5,000 ರೂ.ಗಿಂತ ಹೆಚ್ಚಿನ ಹಳೆಯ ನೋಟುಗಳನ್ನು ಸ್ವೀಕರಿಸಲಾಗುವುದು ಎಂದೂ ಅದು ತಿಳಿಸಿದೆ.
ನೂತನ ನಿರ್ಬಂಧದಿಂದ ನುಣುಚಿಕೊಳ್ಳಲು ಒಂದು ಖಾತೆಯಲ್ಲಿ ಹಳೆಯ ನೋಟುಗಳಲ್ಲಿ 5,000 ರೂ.ಗಿಂತ ಕಡಿಮೆ ಮೊತ್ತವನ್ನು ಹಲವು ಬಾರಿ ಠೇವಣಿಯರಿಸುವುದಕ್ಕೂ ಆರ್‌ಬಿಐ ಅಂಕುಶವನ್ನಿಟ್ಟಿದೆ. ಒಂದಕ್ಕಿಂತ ಹೆಚ್ಚು ಬಾರಿ ಸಣ್ಣ ಠೇವಣಿಗಳ ಸಂಚಿತ ಮೊತ್ತ 5,000 ರೂ.ಗಳನ್ನು ಮೀರಿದರೆ ಗ್ರಾಹಕರು ಬ್ಯಾಂಕ್ ಅಧಿಕಾರಿಗಳಿಗೆ ತೃಪ್ತಿಕರ ವಿವರಣೆಯನ್ನು ನೀಡಬೇಕಾಗುಇತ್ತದೆ ಮತ್ತು ಅವರು ಡಿ.30ರ ವರೆಗೆ ತಮ್ಮ ಬ್ಯಾಂಕ್ ಖಾತೆಯಲ್ಲಿ ಮತ್ತೆ ಹಳೆಯ ನೋಟುಗಳನ್ನು ಜಮಾ ಮಾಡುವಂತಿಲ್ಲ. ಆದರೆ ಹೊಸ ಕಪ್ಪುಹಣ ಕ್ಷಮಾದಾನ ಯೋಜನೆ ಪಿಎಂಜಿಕೆವೈ ಅಡಿ ಎಷ್ಟು ಮೊತ್ತದ ಹಳೆಯ ನೋಟುಗಳನ್ನಾದರೂ ಜಮೆ ಮಾಡಬಹುದು ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ. ಡಿ.30ರವರೆಗೆ ಒಂದು ಬಾರಿ ಮಾತ್ರ 5,000 ರೂ.ವರೆಗೆ ಹಳೆಯ ನೋಟುಗಳಲ್ಲಿ ಜಮಾ ಮಾಡುವವರಿಗೆ ಯಾವುದೇ ರಗಳೆಯಿಲ್ಲ.
ಹಳೆಯ ನೋಟುಗಳ ಠೇವಣಿಗೆ ಅಂತಿಮ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ಕಪ್ಪುಹಣ ಜಮೆಯಾಗುವುದನ್ನು ತಡೆಯುವುದು ಆರ್‌ಬಿಐನ ಹೊಸ ನಿರ್ಬಂಧದ ಉದ್ದೇಶವಾಗಿದೆ. ಗಡುವು ಅಂತ್ಯಗೊಳ್ಳಲು ಕೇವಲ 11 ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಹೊಸ ನಿರ್ಬಂಧಗಳು ಸೀಮಿತ ಠೇವಣಿಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತವೆ ಮತ್ತು ಇಂತಹ ಠೇವಣಿಗಳ ಮೇಲೆ ನಿಕಟ ನಿಗಾ ಇರಿಸಲಾಗುತ್ತದೆ. 5,000 ರೂ.ಗಿಂತ ಹೆಚ್ಚಿನ ಹಳೆಯ ನೋಟುಗಳನ್ನು ಕೆವೈಸಿ ಪಾಲನೆಯಾಗಿರುವ ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಜಮಾ ಮಾಡಬಹುದು ಎಂದೂ ಆರ್‌ಬಿಐ ಹೇಳಿದೆ.
ನ.8ರಂದು ನೋಟು ರದ್ದತಿಯನ್ನು ಪ್ರಕಟಿಸುವ ಮೂಲಕ ಸರಕಾರವು ಚಲಾವಣೆಯಲ್ಲಿದ್ದ 5.44 ಲ.ಕೋ.ರೂ.ವೌಲ್ಯದ ಶೇ.86ರಷ್ಟು ನೋಟುಗಳನ್ನು ಹಿಂದೆಗೆದುಕೊಂಡಿತ್ತು. ಈವರೆಗೆ ಸುಮಾರು 13 ಲ.ಕೋ.ರೂ.ಗಳ ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿವೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.