ಸೆಲ್ಫಿ ತೆಗೆದಿದ್ದಕ್ಕೆ ಗುಂಡು ಹಾರಿಸಿದ ಗಾರ್ಡ್ !

Update: 2016-12-19 08:45 GMT

ಜೈಪುರ(ರಾಜಸ್ಥಾನ),ಡಿ.19: ಜೈಪುರದ ಜಗತ್‌ಪುರದಲ್ಲಿನ ಫಾರ್ಮ್ ಹೌಸೊಂದರ ಎದುರು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಕ್ಕಾಗಿ ಸೆಕ್ಯೂರಿಟಿ ಗಾರ್ಡ್ ಗುಂಡುಗಳನ್ನು ಹಾರಿಸಿದ ಪರಿಣಾಮ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿವೇಕಾನಂದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರೋಹಿತ್ ಕುಮಾವತ್, ಶೈಲೇಂದ್ರ ಕುಮಾರ್,ದೇವೇಂದ್ರ ಕುಮಾರ್ ಮತ್ತು ಇತರ ಇಬ್ಬರು ಶನಿವಾರ ಮಧ್ಯರಾತ್ರಿ ಧಾಬಾದಲ್ಲಿ ಊಟಮುಗಿಸಿಕೊಂಡು ತಮ್ಮ ಹಾಸ್ಟೆಲ್‌ಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿದ್ಯುದ್ದೀಪಗಳಿಂದ ಅಲಂಕೃತ ಫಾರ್ಮ್ ಹೌಸ್‌ನ್ನು ಕಂಡ ರೋಹಿತ್,ಶೈಲೇಂದ್ರ ಮತ್ತು ದೇವೇಂದ್ರ ಸೆಲ್ಫಿ ತೆಗೆದುಕೊಳ್ಳಲು ನಿಂತಿದ್ದರು. ಅವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಸೆಕ್ಯೂರಿಟಿ ಗಾರ್ಡ್ ಆಕ್ಷೇಪಿಸಿದ್ದ.ಇದು ಅವರ ನಡುವೆ ವಾಗ್ವಾದಕ್ಕೆಕಾರಣವಾಗಿತ್ತು.ಸಿಟ್ಟಿನಿಂದ ಕುದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ತನ್ನ 12 ಬೋರ್ ಬಂದೂಕಿನಿಂದ ಗುಂಡುಗಳನ್ನು ಹಾರಿಸಿದಾಗ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.ಮುಂದಕ್ಕೆ ಸಾಗಿದ್ದ ಇತರ ಇಬ್ಬರು ವಿದ್ಯಾರ್ಥಿಗಳು ಗುಂಡಿನ ಶಬ್ದ ಕೇಳಿ ವಾಪಸ್ ಬಂದು ಘಟನೆಯ ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದರು.

ರೋಹಿತ್ ಸ್ಥಿತಿ ಚಿಂತಾಜನಕವಾಗಿದ್ದು, ಮುಂದಿನ 72 ಗಂಟೆಗಳವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆನ್ನಲಾಗಿದೆ. ದೇವೇಂದ್ರನ ಕಣ್ಣಿಗೆ ಗುಂಡು ಬಡಿದು ಗಾಯವಾಗಿದೆ.

ಸೆಕ್ಯೂರಿಟಿಗಾರ್ಡ್ ಜೋರ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.ತಾನು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದೆ,ಆದರೆ ಆಕಸ್ಮಿಕವಾಗಿ ವಿದ್ಯಾರ್ಥಿಗಳಿಗೆ ತಗುಲಿದೆ ಎಂದಾತ ಪೊಲೀಸರ ವಿಚಾರಣೆ ಸಂದರ್ಭ ಹೇಳಿಕೊಂಡಿದ್ದಾನೆ.

ಫಾರ್ಮ್‌ಹೌಸ್ ಜೈಪುರ ನ್ಯಾಷನಲ್ ಯುನಿವರ್ಸಿಟಿಯ ಕುಲಾಧಿಪತಿ ಹಾಗೂ ಅಧ್ಯಕ್ಷ ಸಂದೀಪ್ ಬಕ್ಷಿಯವರಿಗೆ ಸೇರಿದ್ದಾಗಿದೆ. ವಿದ್ಯಾರ್ಥಿಗಳು ಫಾರ್ಮ್‌ಹೌಸ್‌ಗೆ ಅನಧಿಕೃತ ಪ್ರವೇಶ ಮಾಡಿ ಅಲ್ಲಿ ನಿಲ್ಲಿಸಿದ್ದ ಎರಡು ಕಾರುಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದರು.ಆಕಸ್ಮಿಕವಾಗಿ ಅವರು ಗಾಯಗೊಂಡಿದ್ದಾರೆ ಎಂದು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News