ನೋಟು ರದ್ಧತಿಯಿಂದ ವ್ಯಾಪಾರಕ್ಕೆ ಪೆಟ್ಟು
ಮುಂಬೈ,ಡಿ.19: ತುತ್ತಿನ ಚೀಲವನ್ನು ತುಂಬಿಕೊಳ್ಳಲು ಬೀದಿ ಬದಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಕಾಂದಿವಿಲಿಯ ನಿವಾಸಿ ಶಕುಂತಲಾ ವಾನಿ(51)ಯ ಬಳಿ ಕಪ್ಪುಹಣ ಎಲ್ಲಿಂದ ಬಂದೀತು? ನ.8ರಂದು ಸರಕಾರವು ನೋಟುಗಳನ್ನು ರದ್ದುಗೊಳಿಸಿದ ಬಳಿಕ ಹೇಗೋ ದಿನಗಳನ್ನು ದೂಡಿಕೊಂಡು ಬಂದಿದ್ದ ಆಕೆ, ಈಗ ತನ್ನ ಕುಟುಂಬ ಹೊಟ್ಟೆಯ ಮೇಲೆ ತಣ್ಣೀರುಪಟ್ಟಿ ಹಾಕಿಕೊಳ್ಳುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಕಳೆದ 20 ವರ್ಷಗಳಿಂದ ಬೀದಿ ಬದಿಯಲ್ಲಿ ತರಕಾರಿ ಮಾರಿಕೊಂಡು ಬದುಕು ಸಾಗಿಸುತ್ತಿರುವ ಠಾಕುರ್ ಗ್ರಾಮದ ಛೋಟೆ ಲಾಲ್(55) ಎಂದೂ ಡಿಜಿಟಲ್ ವ್ಯಾಲೆಟ್ ಬಳಸಿದವನಲ್ಲ. ಪೇಟಿಎಂ ಹೇಗೆ ಕೆಲಸಮಾಡುತ್ತದೆ ಎನ್ನುವುದೂ ಅವನಿಗೆ ಗೊತ್ತಿಲ್ಲ. ಈ ಡಿಜಿಟಲ್ ವ್ಯವಹಾರವೇನಿದ್ದರೂ ಯುವಜನತೆಗೇ ಹೊರತು ತನ್ನಂತಹ ವಯಸ್ಸಾದವರಿಗಲ್ಲ ಎನ್ನುತ್ತಾನೆ ಆತ.
ಇವು ನೋಟು ರದ್ದತಿಯಿಂದ ಸಣ್ಣಪುಟ್ಟ ವ್ಯಾಪಾರಿಗಳು ಅನುಭವಿಸುತ್ತಿರುವ ಸ್ಯಾಂಪಲ್‌ಗಳು ಮಾತ್ರ.
500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿ 41 ದಿನಗಳು ಕಳೆದಿವೆ. ಆದರೆ ಮುಂಬ್ಯೆನ ಬೀದಿಗಳಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಭವಿಷ್ಯದಲ್ಲಿನ್ನೂ ಅಂಧಕಾರವೇ ತುಂಬಿದೆ. ನೋಟು ನಿಷೇಧ ಅವರ ವ್ಯಾಪಾರಕ್ಕೆ ಭಾರೀ ಏಟು ನೀಡಿದ್ದು, ಅವರ ಸಂಪಾದನೆ ಅರ್ಧಕ್ಕೆ ಇಳಿದಿದೆ. ಸದ್ಯೋಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಣೆಯಾಗಬಹುದೆಂಬ ಯಾವುದೇ ಆಶಾಭಾವನೆ ಅವರಲ್ಲಿ ಉಳಿದಿಲ್ಲ.
ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಸರಕಾರವು ಹೇಳುತ್ತಲೇ ಇದೆ. ಅದರೆ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪ್ರತಿ ದಿನವೂ 3000 ರೂ.ನಷ್ಟು ವ್ಯಾಪಾರವನ್ನು ಕಳೆದುಕೊಳ್ಳುತ್ತಿದ್ದೇನೆ. ನನ್ನಂತಹ ಸಣ್ಣ ವ್ಯಾಪಾರಿಗಳಿಗೆ ಅದು ದೊಡ್ಡ ಮೊತ್ತ ಎನ್ನುತ್ತಾನೆ ಕಳೆದ ಕೆಲವು ವರ್ಷಗಳಿಂದ ಬೀದಿಬದಿಯಲ್ಲಿ ತರಕಾರಿಗಳನ್ನು ಮಾರುತ್ತಿರುವ ಮಿಂಟು ಮಂಡಲ್. ನೋಟು ರದ್ದತಿಯ ಬಳಿಕ ಆತ ಪೇಟಿಎಂಗೆ ಮೋರೆ ಹೋಗಿದ್ದನಾದರೂ ಆತ ತರಕಾರಿ ಖರೀದಿಸುವ ಹೆಚ್ಚಿನ ಸಗಟು ಮಾರಾಟ ಗಾರರು ಡಿಜಿಟಲ್ ವ್ಯಾಲೆಟ್ ಬಳಸುತ್ತಿಲ್ಲ. ಒಬ್ಬರೋ ಇಬ್ಬರೋ ವ್ಯಾಪಾರದ ಮೊತ್ತ 10,000 ಅಥವಾ 20,000 ರೂ.ಗಳಿದ್ದರೆ ಮಾತ್ರ ಪೇಟಿಎಂ ಮೂಲಕ ಹಣವನ್ನು ಸ್ವೀಕರಿಸುತ್ತಾರೆ. ನಮ್ಮಂತಹ ಸಣ್ಣಪುಟ್ಟ ಖರೀದಿದಾರರು ಅವರಿಗೆ ನಗದು ಹಣವನ್ನೇ ಪಾವತಿಸಬೇಕು, ಆದರೆ ಸಾಕಷ್ಟು ನಗದು ನಮ್ಮ ಬಳಿಯಿಲ್ಲ ಎಂದಾತ ಗೋಳು ತೋಡಿಕೊಂಡ. ಸರಕಾರದ ನೋಟು ರದ್ದತಿಯಿಂದ ನಮ್ಮಂತಹ ಸಣ್ಣ ವ್ಯಾಪಾರಿಗಳೇ ಸಂಕಷ್ಟಗಳನ್ನು ಎದುರಿಸುತ್ತಿರೋದು. ಶ್ರೀಮಂತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದಾತ ಕಿಡಿಕಾರಿದ.
ಕಳೆದ ಎಂಟು ವರ್ಷಗಳಿಂದಲೂ ತರಕಾರಿ ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ರಾಜ್‌ಕುಮಾರ್‌ನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆತ ಪೇಟಿಎಂ ಬಳಸುತ್ತಿದ್ದಾನಾದರೂ ಹೆಚ್ಚಿನ ಗ್ರಾಹಕರು ಅದನ್ನು ಇಷ್ಟಪಡುತ್ತಿಲ್ಲ. ಅವರು ತರಕಾರಿ ಖರೀದಿಗೆ ನೀಡುವುದು 2,000 ರೂ.ನೋಟುಗಳನ್ನೇ. ಬಡಪಾಯಿ ರಾಜ್‌ಕುಮಾರ್ ಅವರಿಗೆ ಚಿಲ್ಲರೆ ವಾಪಸ್ ಮಾಡುವುದಾದರೂ ಎಲ್ಲಿಂದ?
ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತರುವ ಸಣ್ಣ ರೈತರದೂ ಇದೇ ಗೋಳು. ಅವರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಹೀಗಾಗಿ ಅವರು ಪೇಟಿಎಂ ಬಳಸುವುದಾದರೂ ಹೇಗೆ? ನಗದು ಕೊಟ್ಟು ಯಾರಾದರೂ ವ್ಯಾಪಾರಿ ತಮ್ಮ ಮಾಲು ಖರೀದಿಸಬಹುದೇ ಎಂದು ಮಾರುಕಟ್ಟೆಯನ್ನೆಲ್ಲ ಸುತ್ತುವ ಅವರು ಬಳಿಕ ಕಡಿಮೆ ಬೆಲೆಗೆ ಮಾರಿಕೊಂಡು ಮನೆಯ ದಾರಿ ಹಿಡಿಯುವ ಪರಿಸ್ಥಿತಿ ಇದೆ.
ಹೆಸರು ಹೇಳಿಕೊಳ್ಳಲು ಬಯಸದ ಇನ್ನೋರ್ವ ವ್ಯಾಪಾರಿ, ತಾನು ಮೊದಲು ದಿನಕ್ಕೆ 5,000 ರೂ.ಗಳಿಸುತ್ತಿದ್ದೆ. ಇಗ ಅದರ ಅರ್ಧದಷ್ಟೂ ಸಿಗುತ್ತಿಲ್ಲ. ಕಳೆದ 17ವರ್ಷಗಳಿಂದ ತಾನು ತರಕಾರಿ ಮಾರಾಟ ಮಾಡುತ್ತಿದ್ದೇನೆ. ಆದರೆ ಈಗಿನಷ್ಟು ಕೆಟ್ಟ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ಹೇಳಿದ.
ಹೆಚ್ಚಿನ ಸಣ್ಣಪುಟ್ಟ ವ್ಯಾಪಾರಿಗಳು ಸರಕಾರದ ನೋಟು ರದ್ದತಿ ಕ್ರಮವನ್ನು ಆರಂಭದಲ್ಲಿ ಹೊಗಳಿದ್ದರು. ಆದರೆ ಅವರೇ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕ್ರಮ ನಮ್ಮಂತಹ ಬಡವರ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸರಕಾರವು ಚಿಂತಿಸಬೇಕಾಗಿತ್ತು. ಸಣ್ಣ ಮುಖಬೆಲೆಗಳ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಿದ್ದರೆ ಒಳ್ಳೆಯದಿತ್ತು. ಈ 2,000 ರೂ.ನೋಟು ನಮಗೆ ತುಂಬ ಸಮಸ್ಯೆಗಳನ್ನುಂಟು ಮಾಡುತ್ತಿದೆ ಎಂದು ಓರ್ವ ವ್ಯಾಪಾರಿ ಹೇಳಿದ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.