ದಿಲ್ಲಿಯ ಲುಟ್ಯೆನ್ಸ್ ನಲ್ಲಿ ಡಿಎಲ್ ಎಫ್ ಮಾಲಕನ ಪುತ್ರಿ ಖರೀದಿಸಿದ ಬಂಗಲೆಗೆ ಎಷ್ಟು ಕೋಟಿ ಗೊತ್ತೇ ?
ಹೊಸದಿಲ್ಲಿ.ಡಿ.19: ರಿಯಾಲ್ಟಿ ಸಂಸ್ಥೆ ಡಿಎಲ್‌ಎಫ್‌ನ ಮಾಲಕ ಕೆ.ಪಿ.ಸಿಂಗ್ ಅವರ ಪುತ್ರಿ ರೇಣುಕಾ ತಲ್ವಾರ್ ದಿಲ್ಲಿಯ ಪೃಥ್ವಿರಾಜ್ ರಸ್ತೆಯಲ್ಲಿನ ಬಂಗಲೆಯನ್ನು 435 ಕೋ.ರೂ.ಗೆ ಖರೀದಿಸಿ ಎಲ್ಲರನ್ನೂ ದಂಗುಬಡಿಸಿದ್ದಾರೆ. ಇದು ಲುಟ್ಯೆನ್ಸ್ ನಲ್ಲಿ ಅತ್ಯಂತ ದೊಡ್ಡ ಆಸ್ತಿ ವ್ಯವಹಾರಗಳಲ್ಲಿ ಒಂದಾಗಿದೆ ಎನ್ನುತ್ತಿವೆ ಬಲ್ಲ ಮೂಲಗಳು.
ರಿಯಲ್ ಎಸ್ಟೇಟ್ ಡೆವಲಪರ್ ಟಿಡಿಐ ಇನ್‌ಫ್ರಾ ಕಾರ್ಪ್‌ನ ಆಡಳಿತ ನಿರ್ದೇಶಕ ಕಮಲ್ ತನೇಜಾ ಈ ಬಂಗಲೆಯನ್ನು ತಲ್ವಾರ್‌ಗೆ ಮಾರಾಟ ಮಾಡಿದ್ದಾರೆ. 4,925 ಚ.ಮೀ.ವಿಸ್ತೀರ್ಣದ ನಿವೇಶನದಲ್ಲಿರುವ ಈ ಬಂಗಲೆಯು 1,189 ಚ.ಮೀ.ಬಿಲ್ಟ್‌ಅಪ್ ಏರಿಯಾ ಹೊಂದಿದ್ದು, ಪ್ರತಿಚ.ಮೀ.ಗೆ 8.8 ಲ.ರೂ.ನಂತೆ ಮಾರಾಟವಾಗಿದೆ. ಈ ಪ್ರದೇಶದಲ್ಲಿಯ ಪ್ರಸಕ್ತ ಮಾರುಕಟ್ಟೆ ದರಗಳಂತೆ ಬಂಗಲೆಯ ಮೌಲ್ಯ ಸುಮಾರು 383 ಕೋ.ರೂ.ಗಳಾಗುತ್ತವೆ.
ಶಾಹಿ ಎಕ್ಸ್‌ಪೋರ್ಟ್ಸ್‌ನ ಹರೀಶ ಅಹುಜಾ ಅವರು 2015,ಸೆಪ್ಟಂಬರ್‌ನಲ್ಲಿ 173 ಕೋ.ರೂ.ಗೆ ಬಂಗಲೆಯೊಂದನ್ನು ಖರೀದಿಸಿದ್ದು ಪೃಥ್ವಿರಾಜ್ ರಸ್ತೆಯಲ್ಲಿ ನಡೆದ ಹಿಂದಿನ ದೊಡ್ಡ ವಹಿವಾಟಾಗಿತ್ತು. 2,650 ಚ.ಮೀ.ವಿಸ್ತೀರ್ಣದ ನಿವೇಶನದಲ್ಲಿರುವ 836 ಚ.ಮೀ.ಬಿಲ್ಟ್ ಅಪ್ ಏರಿಯಾ ಪ್ರತಿ ಚ.ಮೀ.ಗೆ 6.53 ಲ.ರೂ.ನಂತೆ ಮಾರಾಟವಾಗಿತ್ತು.
ತಲ್ವಾರ್ ಡಿಎಲ್‌ಎಫ್‌ನ ನಾನ್-ಎಕ್ಸಿಕ್ಯೂಟಿವ್ ನಿರ್ದೇಶಕರಾಗಿರುವ ಜಿ.ಎಸ್.ತಲ್ವಾರ್ ಅವರ ಪತ್ನಿಯಾಗಿದ್ದಾರೆ. ಅವರ ಬಿಲಿಯಾಧಿಪತಿ ತಂದೆ ಈಗಾಗಲೇ ಲುಟ್ಯೆನ್ಸ್ ಪ್ರದೇಶದ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಎರಡು ಬಂಗಲೆಗಳನ್ನು ಹೊಂದಿದ್ದಾರೆ.
2016 ಕಳೆದ ವರ್ಷದಂತಿಲ್ಲ. ಲುಟ್ಯೆನ್ಸ್ ನಲ್ಲಿ ಈ ವರ್ಷ ಆಸ್ತಿಗಳ ವಹಿವಾಟು ಕಳೆಗುಂದಿದೆ. ಖರೀದಿದಾರರು ಮತ್ತು ಮಾರಾಟಗಾರರ ಮಧ್ಯೆ ಬೆಲೆಗಳ ಬಗ್ಗೆ ಸಹಮತ ಕಂಡು ಬರುತ್ತಿಲ್ಲ ಎಂದು ಜೆಎಲ್‌ಎಲ್ ಇಂಡಿಯಾ ಲಿ.ನ ಸಂತೋಷ ಕುಮಾರ್ ಹೇಳಿದರು.
ಲುಟ್ಯೆನ್ಸ್ನ ಬಂಗಲೆಗಳ ವಲಯ ಸುಮಾರು 3,000 ಎಕರೆಗಳಷ್ಟಿದ್ದು, 28.73 ಚ.ಕಿ.ಮೀ.ವಿಸ್ತೀರ್ಣವನ್ನು ಆವರಿಸಿಕೊಂಡಿದೆ. ಇಲ್ಲಿ ಸುಮಾರು 1,000 ಬಂಗಲೆಗಳಿದ್ದು, ಈ ಪೈಕಿ ಕೇವಲ 65-70 ಬಂಗಲೆಗಳು ಮಾತ್ರ ಖಾಸಗಿ ಬಳಕೆಗಾಗಿವೆ. ಉಳಿದ ಬಂಗಲೆಗಳು ಸಚಿವರು ಮತ್ತು ಸರಕಾರಿ ಅಧಿಕಾರಿಗಳಿಗೆ ಮೀಸಲಾಗಿವೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.