ಮಗುವನ್ನು ರಕ್ಷಿಸುವ ಕಳಕಳಿ: ಗೃಹಿಣಿ ಬಲಿ
ಕಾಕ್ಕನಾಡ್, ಡಿ.20: ಮಕ್ಕಳ ಅಳು ಕೇಳಿದರೆ ಮಾತೃ ಪ್ರೇಮ ತುಸು ಗರಿಕೆದರುತ್ತದೆ. ಇಂತಹ ಒಂದು ಸಾಟಿಯಿಲ್ಲದ ಮಾತೃಪ್ರೇಮಕ್ಕೆ ಯುವಗೃಹಿಣಿಯೊಬ್ಬರು ಬಲಿಯಾದ ಘಟನೆ ಕೇರಳದಲ್ಲಿ ಸೋಮವಾರ ನಡೆದಿದೆ. ಪ್ಲಾಟ್‌ನೊಳಗೆ ಬಂಧಿಯಾದ ಎರಡುವರ್ಷದ ಮಗು ತನ್ನನ್ನು ಕಾಣದೆ ಹೆದರಿಕೊಳ್ಳುತ್ತದೆಂದು ಅಲ್ಲಿಗೆ ತೆರಳಲು ಯತ್ನಿಸಿದ ಗೃಹಿಣಿ ವಸತಿಗೃಹದ ಹದಿನಾಲ್ಕನೆ ಮಹಡಿಯಿಂದ ಕೆಳಗೆ ಬಿದ್ದು ಅನ್ಯಾಯವಾಗಿ ಜೀವ ಕಳಕೊಂಡಿದ್ದಾರೆ.
ಗೃಹಿಣಿ ಮೇಘಾ(23) ಎಂಬವರು ವಾಸವಿದ್ದ ಕಾಕ್ಕನಾಡ್ ವಿಎಸ್‌ಎನ್‌ಎಲ್ ರಸ್ತೆಯ ವಸತಿ ಸಮುಚ್ಚಯದ ಹದಿನಾಲ್ಕನೆ ಮಹಡಿಯ ಪ್ಲಾಟ್‌ನ ಅಟೋಮ್ಯಾಟಿಕ್ ಬಾಗಿಲು ತನ್ನಷ್ಟಕ್ಕೆ ಬಿದ್ದದ್ದರಿಂದ ಮಗು ಅದರೊಳಗೆ ಸಿಲುಕಿಕೊಂಡಿತ್ತು. ಅದರ ಬಳಿಗೆ ಹೋಗಲು ಶ್ರಮಿಸುವ ವೇಳೆ ಮೇಘಾ ಆಯತಪ್ಪಿ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟರು.
ಮೃತ ಮಹಿಳೆ ಮಾವೇಲಿಕ್ಕರ ಪುಷ್ಪಮಂಗಲಂ ಎಸ್. ಸುಜಿತ್ ಎಂಬವರ ಪತ್ನಿ. ಮನೆಯ ಕಸದ ಬಕೆಟನ್ನು ಹೊರಗೆ ತೆಗೆದು ಕೊಂಡ ಹೋದ ಸಂದರ್ಭದಲ್ಲಿ ಗಾಳಿ ಬೀಸಿದ್ದರಿಂದ ಪ್ಲಾಟ್‌ನ ಬಾಗಿಲು ಬಿದ್ದಿತ್ತು. ಎರಡು ವರ್ಷದಮಗು ಶಿವತ್ ಪ್ಲಾಟ್‌ನೊಳಗೆ ಬಾಕಿಯಾಗಿದ್ದ. ಸ್ವಯಂಚಾಲಿತ ಬಾಗಿಲು ಆಗಿದ್ದರಿಂದ ಮೇಘಾರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಕೂಡಲೇ ಭದ್ರತಾ ಗಾರ್ಡ್‌ಗೆ ಕರೆದಿದ್ದಾರೆ. ಅವರು ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದರೂ ಬಾಗಿಲು ತೆರೆದು ಕೊಂಡಿರಲಿಲ್ಲ.
ಅಷ್ಟರಲ್ಲಿ ತಾಯಿಯನ್ನು ಕಾಣದ ಮಗು ಜೋರಾಗಿ ಅಳಲಾರಂಭಿಸಿತು. ಇದರಿಂದ ಕರುಳು ಚುರುಕ್ಕೆಂದ ಮೇಘಾ ಪ್ಲಾಟಿನ ಹಿಂಬದಿಯ ಬಾಲ್ಕನಿಗೆ ಹತ್ತಿ ಒಳಗೆ ಹೋಗಲು ಶ್ರಮಿಸಿದ್ದು, ಈ ಸಂದರ್ಭದಲ್ಲಿ ಆಯತಪ್ಪಿ ಪ್ಲಾಟ್‌ನಿಂದ ಕೆಳಗೆ ಉರುಳಿ ಬಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಇದಕ್ಕಿಂತ ಮೊದಲು ಎರಡ ಸಲ ಬಾಗಿಲು ಈರೀತಿ ಬಿದ್ದಿತ್ತು. ಆಗ ಭದ್ರತಾ ಗಾರ್ಡ್‌ಗಳು ಪ್ಲಾಟ್‌ನ ಹಿಂದಿನಿಂದ ಬಾಲ್ಕನಿಗೆ ಹತ್ತಿ ಬಾಗಿಲು ತೆರೆದು ಕೊಟ್ಟಿದ್ದರು. ಇದನ್ನು ನೋಡಿದ್ದ ಮೇಘಾ ಅದೇ ರೀತಿಯ ಸಾಹಸಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಹದಿನಾಲ್ಕನೆ ಮಹಡಿಯಿಂದ ಕಾರುಶೆಡ್‌ನ ಮೇಲೆ ಬಿದ್ದು ಅಲ್ಲಿಂದ ನೆಲಕ್ಕುರುಳಿದ್ದ ಮೇಘಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾದರೂ ಅಲ್ಲಿ ಅವರು ನಿಧನರಾದರು. ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮಂಗಳವಾರ ನಡೆಯಲಿದೆ ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.