×
Ad

ಮಗ ಗೂಗಲ್ ಇಂಜಿನಿಯರ್, ಆದರೂ ಕೂಲಿಕೆಲಸ ಬಿಡಲಾರೆ ಎನ್ನುವ ತಂದೆ !

Update: 2016-12-20 13:59 IST

ಜೈಪುರ, ಡಿ.20: ರಾಜಸ್ಥಾನದ ತೇಜರಾಂ, ಪುತ್ರ ಗೂಗಲ್ ಇಂಜಿನಿಯರ್ ಆದರೂ ತಲೆಹೊರೆ ಕಾರ್ಮಿಕನ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ತೇಜರಾಂ ಪುತ್ರ ರಾಮಚಂದ್ರ ಅಮೆರಿಕದಲ್ಲಿ ಗೂಗಲ್ ಕಚೇರಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ತನ್ನ ಮಗ ಇಷ್ಟುದೊಡ್ಡ ಹುದ್ದೆಯಲ್ಲಿದ್ದರೂ ತೇಜರಾಂಗೆ ತಾನು ನಡೆದು ಬಂದ ದಾರಿಯನ್ನು ಮರೆಯಲು ಸಾಧ್ಯವಿಲ್ಲ. ಅದೃಷ್ಣ ಅರಸಿ ಬಂದಾಗ ತಮ್ಮ ಮಟ್ಟವನ್ನೇ ಮರೆಯುವ ಇಂದಿನ ಜನರ ನಡುವೆ ತೇಜರಾಂ ವಿಶಿಷ್ಟ ವ್ಯಕ್ತಿಯಾಗಿದ್ದಾರೆ.

ತನಗೆ ಒಳ್ಳೆಯ ಕೆಲಸ ಇದೆ.ಇನ್ನು ತಲೆಹೊರೆ ಕಾರ್ಮಿಕನಾಗಿ ದುಡಿಯಬೇಡಿ ಎಂದು ರಾಮಚಂದ್ರ ಅಪ್ಪನಿಗೆ ಹೇಳಿದರೂ ತೇಜರಾಂ ಅದಕ್ಕೆ ಸಿದ್ಧರಿಲ್ಲ. ಕೆಲಸಮಾಡಿ ಬದುಕದಿದ್ದರೆ ತಾನು ಯಾವುದಕ್ಕೂ ಬೇಡದವನಾಗುವೆ ಎಂದು ತೇಜರಾಂ ಹೇಳುತ್ತಾರೆ. ರಾಮ ಚಂದ್ರ ಕೂಡಾ ತಂದೆಯ ಆಸೆಯನ್ನು ತಾನು ವಿರೋಧಿಸುವುದಿಲ್ಲ ಎನ್ನುತ್ತಾರೆ. ಗೂಗಲ್‌ನ ಭಾರತದ ಕಚೇರಿಯಲ್ಲಿ 2013ರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ರಾಮಚಂದ್ರ ಈ ವರ್ಷ ಎಪ್ರಿಲ್‌ನಲ್ಲಿ ಅಮೆರಿಕಕ್ಕೆ ಹೋಗಿದ್ದರು.

ರಾಜಸ್ಥಾನದ ಸೋಜತ್ ಎಂಬಲ್ಲಿನ ಸರಕಾರಿ ಶಾಲೆಯಲ್ಲಿ ಕಲಿತು ರಾಮಚಂದ್ರ ಈ ಉನ್ನತ ಮಟ್ಟಕ್ಕೆ ದಾಪುಗಾಲಿಟ್ಟವರು. ಕೋಟ ಎಂಬಲ್ಲಿನ ಎಂಟ್ರಾನ್ಸ್ ಕೋಚಿಂಗ್ ಸೆಂಟರ್‌ನಿಂದ ತರಬೇತಿ ಪಡೆದು ಐಐಟಿಗೆ ಅವರು ಪ್ರವೇಶ ಪಡೆದಿದ್ದರು. ಅವರು ದಾನಿಗಳ ನೆರವಿನಿಂದ ತನ್ನ ಕಲಿಕೆಯನ್ನು ಪೂರ್ತಿಗೊಳಿಸಿದ್ದರು ಎಂದು ವರದಿಯೊಂದು ತಿಳಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News