×
Ad

ಕಪ್ಪುಹಣ ಕುರಿತು 72 ಗಂಟೆಗಳಲ್ಲಿ 4,000 ಇ-ಮೇಲ್ ಸ್ವೀಕರಿಸಿದ ಸರಕಾರ

Update: 2016-12-20 16:03 IST

ಹೊಸದಿಲ್ಲಿ,ಡಿ.20: ಕಪ್ಪುಹಣವನ್ನು ಹೊಂದಿರುವ ವ್ಯಕ್ತಿಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಸಾಧ್ಯವಾಗುವಂತೆ ಇ-ಮೇಲ್ ವಿಳಾಸವನ್ನು ಶುಕ್ರವಾರವಷ್ಟೇ ಪ್ರಕಟಿಸಲಾಗಿತ್ತು. ಇದಾಗಿ ಕೇವಲ 72 ಗಂಟೆಗಳಲ್ಲಿ ಸರಕಾರಕ್ಕೆ 4,000 ಇ-ಮೇಲ್‌ಗಳ ಮಹಾಪೂರವೇ ಹರಿದುಬಂದಿದೆ.

ನಮಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿಗಳು ಮತ್ತು ಇತರ ಅಘೋಷಿತ ಸಂಪತ್ತಿನ ಕುರಿತು ವಿತ್ತ ಸಚಿವಾಲಯದ ಅಧೀನದಲ್ಲಿರುವ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ದ ಮೂಲಕ ಪ್ರತಿದಿನ ತೆರಿಗೆ ಅಧಿಕಾರಿಗಳು ಮತ್ತು ಇತರ ತನಿಖಾ ಸಂಸ್ಥೆಗಳಿಗೆ ಹರಿದುಬರುತ್ತಿರುವ ಅಗಾಧ ಮಾಹಿತಿಗಳ ಹೊರತಾಗಿ ಸಾರ್ವಜನಿಕರಿಂದ ಇ-ಮೇಲ್ ಮಾಹಿತಿಗಳು ಲಭಿಸುತ್ತಿವೆ. ಎಫ್‌ಯುಐ ಮಾಹಿತಿಗಳ ಆಧಾರದಲ್ಲಿ ಸರಕಾರವು ಈಗಾಗಲೇ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಇ-ಮೇಲ್‌ಗಳಲ್ಲಿರುವ ಕಪ್ಪುಹಣ ಕುರಿತ ಆರೋಪಗಳು ಕಾಳಧನದ ಪಿಡುಗನ್ನು ನಿರ್ಮೂಲಿಸುವ ಸರಕಾರದ ಹಾಲಿ ಪ್ರಯತ್ನಗಳಿಗೆ ಇನ್ನಷ್ಟು ಉತ್ತೇಜನ ನೀಡಲಿವೆ. ದೇಶಾದ್ಯಂತ ದಾಳಿಗಳನ್ನು ನಡೆಸುತ್ತಿರುವ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾ ಲಯ(ಇಡಿ)ದ ಅಧಿಕಾರಿಗಳು ಹಳೆಯ ಮತ್ತು ಹೊಸನೋಟುಗಳ ಜೊತೆಗೆ ಚಿನ್ನಾಭರಣಗಳು ಮತ್ತು ಇತರ ಅಧಿಕ ವೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚುತ್ತಿ ದ್ದಾರೆ. ಅಕ್ರಮ ವಿಧಾನಗಳ ಮೂಲಕ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದ ಹಲವಾರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಲಾಗಿದೆ, ಸೇವೆಯಿಂದ ಅಮಾನತುಗೊಳಿಸಲಾಗಿದೆ ಇಲ್ಲವೇ ವಜಾ ಮಾಡಲಾಗಿದೆ. ಸರಕಾರಕ್ಕೆ ಬಂದಿರುವ ಮಾಹಿತಿಗಳು ಜನಧನ್ ಮತ್ತು ಸಹಕಾರಿ ಬ್ಯಾಂಕ್ ಶಾಖೆಗಳಲ್ಲಿ ಠೇವಣಿಗಳು, ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಪಾವತಿ, ವಿದ್ಯುನ್ಮಾನ ಹಣ ವರ್ಗಾವಣೆ, ಹಣ ಹಿಂದೆಗೆತ ಇತ್ಯಾದಿಗಳಿಗೆ ಸಂಬಂಧಿಸಿವೆ.

ಚಿನ್ನಾಭರಣಗಳು,ಐಷಾರಾಮಿ ವಸ್ತುಗಳು ಮತ್ತು ಆಸ್ತಿ ಸೇರಿದಂತೆ ಅಧಿಕ ವೌಲ್ಯದ ಖರೀದಿಗಳ ಬಗ್ಗೆಯೂ ಮಾಹಿತಿಗಳು ಹರಿದುಬಂದಿವೆ. ಹೆಚ್ಚಿನ ನಗದು ಶಿಲ್ಕು ತೋರಿಸು ತ್ತಿರುವ ಕಂಪನಿಗಳೂ ಆದಾಯ ತೆರಿಗೆ ಇಲಾಖೆಗಳ ನಿಗಾಕ್ಕೊಳಗಾಗಬಹುದು.

ಉದಾಹರಣೆಗೆ ತಮ್ಮ ಉದ್ಯೋಗಿಗಳು ಮಾಡಿರುವ ಅಕ್ರಮಗಳನ್ನು ಬ್ಯಾಂಕುಗಳೇ ಎಫ್‌ಐಯುಗೆ ತಿಳಿಸಿವೆ ಮತ್ತು ಬಳಿಕ ಉಳಿದ ತನಿಖಾ ಸಂಸ್ಥೆಗಳು ಈ ಮಾಹಿತಿಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದರು.

ನ.8ರಂದು ನೋಟುಗಳ ರದ್ದತಿಯ ಬಳಿಕ ಎಸ್‌ಬಿಐ,ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತಿತರ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಹಳೆಯ ನೋಟುಗಳು ಜಮೆಯಾಗಿವೆ. ಎಲ್ಲ ಬ್ಯಾಂಕುಗಳು ಶಂಕಾಸ್ಪದ ವಹಿವಾಟುಗಳನ್ನು ಎಫ್‌ಐಯುಗೆ ವರದಿ ಮಾಡಬೇಕಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News