ಪೊಲೀಸ್ ಠಾಣೆಗೆ ಮಹಿಳೆಯರು,ಮಕ್ಕಳು ಧೈರ್ಯದಿಂದ ಬರುವಂತಾಗಬೇಕು: ಪಿಣರಾಯಿ
ತೃಶೂರ್,ಡಿ.20: ಮಹಿಳೆಯರು ಮತ್ತು ಮಕ್ಕಳು ಪೊಲೀಸ್‌ಠಾಣೆಗೆ ಧೈರ್ಯದಿಂದ ಹೋಗಿ ದೂರು ನೀಡಲು ಮತ್ತು ನ್ಯಾಯ ಯಾಚಿಸಲು ಸಾಧ್ಯವಾಗಬೇಕೆಂದು ಕೇರಳಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ತನ್ನ ಸರಕಾರ ಅಂತಹ ವಾತಾವರಣ ಹುಟ್ಟುಹಾಕಲು ಬದ್ಧವಾಗಿದೆ. ಮಹಿಳಾ ಸುರಕ್ಷೆಯ ವಿಚಾರದಲ್ಲಿ ಯಾವ ರಾಜಿಗೂ ಸಿದ್ಧನಿಲ್ಲ. ಪೊಲೀಸ್ ಎನ್ನುವಾಗ ಜನರಿಗೆ ಹೆದರಿಕೆಯಾಗಬಾರದು, ಅವರಲ್ಲಿ ಸುರಕ್ಷಿತತೆಯ ಭಾವನೆ ಉಂಟಾಗಬೇಕು. ಪೊಲೀಸ್ ಶೈಲಿಯಲ್ಲಿ ಇಂತಹ ಬದಲಾವಣೆ ಆಗಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಕ್ಕಳು, ಮಹಿಳೆಯರಿಗಾಗಿ ಕೇರಳದಲ್ಲಿ ಸ್ಥಾಪನೆಗೊಳ್ಳಲಿರುವ ಪೊಲೀಸ್ ಕಮಿಶನರೇಟ್‌ನ ’ಪಿಂಕ್ ಪೊಲೀಸ್ ಪೆಟ್ರೋಲ್ ಯೋಜನೆ’ಯನ್ನು ತೃಶೂರ್ ಸಿಟಿಯಲ್ಲಿ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಮಹಿಳೆಯರು ದೂರು ನೀಡಲು ಪೊಲೀಸರ ಬಳಿ ಹೋದರೆ ಮಾನಸಿಕ ಕಿರುಕ್ಕೊಳಗಾಗುವೆವೋ ಎಂದು ಹೆದರುತ್ತಾರೆ. ಈ ಅವಸ್ಥೆ ಸಂಪೂರ್ಣ ಬದಲಾಗಬೇಕು. ಗೌರವ ಮತ್ತು ಸಾಂತ್ವನದ ಶೈಲಿಯಲ್ಲಿ ಪೊಲೀಸರು ವರ್ತಿಸಬೇಕು. ಅದಕ್ಕೆ ಅಗತ್ಯವಾದ ವಿಶೇಷ ಸಂಸ್ಕಾರ ಬೆಳೆದು ಬರಬೇಕು. ಮಹಿಳೆಯರಿಗಾಗುತ್ತಿರುವ ಹೆಚ್ಚಿನಕಿರುಕುಳಗಳು ಹೊರಜಗತ್ತಿಗೆ ಅರಿವಾಗುವುದೇ ಇಲ್ಲ. ಹೆಚ್ಚಿನವರು ಮರ್ಯಾದೆಗೆ ಅಂಜಿ ತಮಗಾದ ಕಿರುಕುಳಗಳನ್ನು ಹೊರಗೆ ಹೇಳಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಹೀಗೆ ಮಾಡುವುದರಿಂದ ಆರೋಪಿಗಳು ಪಾರಾಗುತ್ತಾರೆ. ಧೈರ್ಯದಿಂದ ಸತ್ಯವನ್ನು ಹೇಳಿರಿ. ಅರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ. ತೃಶೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ವಿ.ಎಸ್ ಸುನೀಲ್‌ಕುಮಾರ್ ವಹಿಸಿದ್ದರು ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.