ಉ.ಪ್ರದೇಶ:ಹಣವಿಲ್ಲದ ಬ್ಯಾಂಕುಗಳ ಮೇಲೆ ದಾಳಿ
ಮೀರತ್,ಡಿ.20: ಉತ್ತರ ಪ್ರದೇಶದ ಶಾಮ್ಲಿ ಮತ್ತು ಮುಝಫರ್‌ನಗರ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ನಿನ್ನೆ ಹಣದ ಕೊರತೆಯಲ್ಲಿದ್ದ ಬ್ಯಾಂಕುಗಳ ವಿರುದ್ಧ ಕುಪಿತ ಗ್ರಾಮಸ್ಥರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕೆಲವು ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಹಾನಿಯನ್ನು ಮಾಡಿದ್ದಾರೆ.
ನಿನ್ನೆ ಮುಝಫರ್‌ನಗರ ಜಿಲ್ಲೆಯ ಕಕ್ರೋಲಿ ಗ್ರಾಮದಲ್ಲಿ ಎಸ್‌ಬಿಐ ಶಾಖೆಯೆದುರು ಹಣಕ್ಕಾಗಿ ಸಂಜೆಯವರೆಗೂ ಕಾದು ನಿಂತು ಹೈರಾಣಾಗಿದ್ದ ಜನರು ಬ್ಯಾಂಕಿಗೆ ಕಲ್ಲುತೂರಾಟ ನಡೆಸಿ, ಬ್ಯಾಂಕಿನ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಕಳೆದೊಂದು ವಾರದಿಂದಲೂ ಈ ಶಾಖೆಯಲ್ಲಿ ಹಣವಿಲ್ಲದ್ದು ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂತಹುದೇ ಇನ್ನೊಂದು ಘಟನೆಯಲ್ಲಿ ಶಾಮ್ಲಿ ಜಿಲ್ಲೆಯ ಫತೇಪುರ ಗ್ರಾಮದಲ್ಲಿ ನಿನ್ನೆ ಸಂಜೆ ಹಣ ಸಿಗದೆ ಸಿಟ್ಟಿಗೆದ್ದಿದ್ದ ಗ್ರಾಮಸ್ಥರು ಉ.ಪ್ರ.ಗ್ರಾಮೀಣ ಬ್ಯಾಂಕಿಗೆ ದಾಳಿನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾರೆ. ಉದ್ರಿಕ್ತ ಗುಂಪು ಮುಖ್ಯರಸ್ತೆಯಲ್ಲಿ ಹಲವಾರು ಗಂಟೆಗಳ ಕಾಲ ವಾಹನ ಸಂಚಾರಕ್ಕೂ ತಡೆಯನ್ನೊಡ್ಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಾಹಕರಿಗೆ ಬುಧವಾರ ಹಣ ದೊರೆಯಲಿದೆ ಎಂದು ಭರವಸೆ ನೀಡಿದ ಬಳಿಕವಷ್ಟೇ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ಹಿಂದೆಗೆದು ಕೊಂಡರು.
ಶಾಮ್ಲಿ ಜಿಲ್ಲೆಯ ಜಲಾಲಾಬಾದ್‌ನಲ್ಲಿ ಸೋಮವಾರ ಸಂಜೆ ತಮ್ಮ ಬಳಿ ಹಣವಿಲ್ಲವೆಂದು ಸ್ಥಳೀಯ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳು ತಿಳಿಸಿದ ಬಳಿಕ ಜನರು ರಸ್ತೆತಡೆಯನ್ನು ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.