×
Ad

ಸಣ್ಣವ್ಯಾಪಾರಿಗಳ ತೆರಿಗೆಯನ್ನು ಶೇ.30ರಷ್ಟು ತಗ್ಗಿಸಲು ಪರಿಷ್ಕೃತ ನಿಯಮ: ಜೇಟ್ಲಿ

Update: 2016-12-20 18:00 IST

ಹೊಸದಿಲ್ಲಿ,ಡಿ.20: ಆದಾಯ ನಿಗದಿ ನಿಯಮಾವಳಿಗಳನ್ನು ಪರಿಷ್ಕರಿಸುವ ಸರಕಾರದ ನಿರ್ಧಾರವು ಡಿಜಿಟಲ್ ವಹಿವಾಟುಗಳಿಗೆ ತೆರೆದುಕೊಳ್ಳುವ ಸಣ್ಣವ್ಯಾಪಾರಿಗಳ ತೆರಿಗೆ ಬಾಧ್ಯತೆಯನ್ನು ಶೇ.30ರಷ್ಟು ತಗ್ಗಿಸಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.

 2016-17ನೇ ಸಾಲಿನ ಮುಂಗಡಪತ್ರದಲ್ಲಿ ಸೂಕ್ತ ಲೆಕ್ಕಪತ್ರವನ್ನು ಇಡದ,ವಾರ್ಷಿಕ ಎರಡು ಕೋ.ರೂ.ವರೆಗೆ ವಹಿವಾಟು ಹೊಂದಿರುವ ಸಣ್ಣವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ತೆರಿಗೆಯನ್ನು ನಿಗದಿಗೊಳಿಸಲು ಅವರ ಲಾಭದ ಪ್ರಮಾಣ ಶೇ.8 ಎಂದು ಪರಿಗಣಿಸಲಾಗಿದೆ. ಆದರೆ ಅವರು ಹಣಪಾವತಿಗಾಗಿ ಡಿಜಿಟಲ್ ವಿಧಾನಗಳನ್ನು ಬಳಸಿದರೆ ಅವರ ಆದಾಯವನ್ನು ಶೇ.6 ಎಂದು ಪರಿಗಣಿಸಿ ಅದರ ಮೇಲೆ ತೆರಿಗೆಯನ್ನು ವಿಧಿಸಲಾಗುವುದು. ಇದರಿಂದಾಗಿ ಇಂತಹ ವ್ಯಾಪಾರಿಗಳು ಪಾವತಿಸುವ ತೆರಿಗೆ ಮೊತ್ತ ಶೇ.30ರವರೆಗೆ ಕಡಿಮೆಯಾಗಲಿದೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ ಹೇಳಿದರು.

 ಆದಾಯ ತೆರಿಗೆ ಕಾಯ್ದೆ,1961ರ ಹಾಲಿ ಕಲಂ 44 ಎಡಿ ಅಡಿ ಯಾವುದೇ ಉದ್ಯಮವನ್ನು ನಡೆಸುತ್ತಿರುವ, ವಾರ್ಷಿಕ ಎರಡು ಕೋ.ರೂ.ಅಥವಾ ಕಡಿಮೆ ವಹಿವಾಟು ಹೊಂದಿರುವ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ(ವ್ಯಕ್ತಿ,ಹಿಂದು ಅವಿಭಜಿತ ಕುಟುಂಬ ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಯನ್ನು ಹೊರತುಪಡಿಸಿ ಪಾಲುದಾರಿಕೆ ಸಂಸ್ಥೆ) ತೆರಿಗೆ ಲೆಕ್ಕಾಚಾರಕ್ಕಾಗಿ ಒಟ್ಟು ವಹಿವಾಟಿನ ಶೇ.8ರಷ್ಟನ್ನು ಲಾಭವೆಂದು ಪರಿಗಣಿಸಲಾಗುತ್ತದೆ. 2016-17ನೇ ಸಾಲಿಗೆ ಬ್ಯಾಂಕಿಂಗ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ವಹಿವಾಟಿನ ಹಣವನ್ನು ಸ್ವೀಕರಿಸುವ ಇಂತಹ ವ್ಯಾಪಾರಿಗಳಿಗೆ ಅಂತಹ ಒಟ್ಟು ವಹಿವಾಟಿನ ಮೇಲೆ ಶೇ.8ರ ಬದಲು ಶೇ.6ರಂತೆ ಲಾಭವನ್ನು ಲೆಕ್ಕ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಸೋಮವಾರ ಹೇಳಿಕೆಯಲ್ಲಿ ತಿಳಿಸಿತ್ತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News