ಪ್ರಧಾನಿ ತನ್ನ ಬಟ್ಟೆಗಳನ್ನು ಬದಲಿಸುವಂತೆ ಆರ್‌ಬಿಐ ತನ್ನ ನಿಯಮಗಳನ್ನು ಬದಲಿಸುತ್ತಿದೆ: ರಾಹುಲ್
ಹೊಸದಿಲ್ಲಿ,ಡಿ.20: ಬ್ಯಾಂಕ್ ಖಾತೆಗಳಲ್ಲಿ ಹಳೆಯ ನೋಟುಗಳ ಠೇವಣಿಯ ಮೇಲೆ ಆರ್‌ಬಿಐ ಹೊಸ ನಿರ್ಬಂಧಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ನೋಟು ರದ್ದತಿ ಕುರಿತು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಇಂದು ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ತನ್ನ ಬಟ್ಟೆಗಳನ್ನು ಬದಲಿಸುವಂತೆ ಆರ್‌ಬಿಐ ತನ್ನ ನಿಯಮಗಳನ್ನು ಬದಲಿಸುತ್ತಿದೆ ಎಂದು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.
ಡಿ.30ರವರೆಗೆ ಬ್ಯಾಂಕ್ ಖಾತೆಯಲ್ಲಿ 5,000 ರೂ.ಗಿಂತ ಹೆಚ್ಚಿನ ಹಳೆಯ ನೋಟು ಗಳನ್ನು ಜಮೆ ಮಾಡಲು ಒಂದೇ ಬಾರಿ ಅವಕಾಶ ಕಲ್ಪಿಸಿರುವ ಹೊಸ ನಿರ್ಬಂಧವನ್ನು ಹಿಂದೆಗೆದುಕೊಳ್ಳಬೇಕು ಎಂದು ಎಐಸಿಸಿ ಆಗ್ರಹಿಸಿದ ಬಳಿಕ ರಾಹುಲ್ ತನ್ನ ಟ್ವಿಟರ್ ಬಾಣವನ್ನು ಬಿಟ್ಟಿದ್ದಾರೆ.
ಮೋದಿಯವರ ತವರು ರಾಜ್ಯ ಗುಜರಾತ್‌ನ ಮೆಹ್ಸಾನಾದಲ್ಲಿ ನೋಟು ರದ್ದತಿ ವಿರುದ್ಧ ರಾಹುಲ್ ನೇತೃತ್ವದಲ್ಲಿ ಬುಧವಾರ ನಡೆಯಲಿರುವ ರ್ಯಾಲಿಗೆ ಮುನ್ನ ಈ ಟೀಕಾಸ್ತ್ರ ಹೊರಬಿದ್ದಿದೆ.
ಸೋಮವಾರ ಜಾನಪುರದಲ್ಲಿ ನಡೆದ ರ್ಯಾಲಿಯಲ್ಲಿ ದೇಶದ ಶೇ.60ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಬಳಿಯಿದೆ. ನೋಟುರದ್ದತಿಯ ಮೂಲಕ ಶೇ.99ರಷ್ಟು ಪ್ರಾಮಾಣಿಕ ಜನರನ್ನು ಮೋದಿ ಲೇವಡಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದ್ದರು.
ಹಳೆಯ ನೋಟುಗಳ ಠೇವಣಿ ಮೇಲೆ ಹೇರಲಾಗಿರುವ ಹೊಸ ನಿರ್ಬಂಧಗಳನ್ನು ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರೂ ಟೀಕಿಸಿದ್ದಾರೆ. ಕಾಳಧನ ಖದೀಮರು ತಮ್ಮ ಕಪ್ಪುಹಣವನ್ನು ಬಿಳಿ ಮಾಡಿಕೊಂಡು ಹಾಯಾಗಿರುವ ಮತ್ತು ಬಡ ಹಾಗೂ ಮಧ್ಯಮ ವರ್ಗಗಳ ಜನರು ಇನ್ನೂ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನೂತನ ನಿರ್ಬಂಧಗಳು ‘ಹತಾಶ ಸರಕಾರದ ಹತಾಶ ಕ್ರಮಗಳಾಗಿವೆ ’ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಬಣ್ಣಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.