×
Ad

ರೈಲ್ವೆ ಸೇವೆಗೆ ಜನರು ಹಣ ಪಾವತಿಸಬೇಕು ಎಂದು ಬೆದರಿಸಿದ ಜೇಟ್ಲಿ

Update: 2016-12-20 19:09 IST

ಹೊಸದಿಲ್ಲಿ, ಡಿ.20: ರೈಲು ಪ್ರಯಾಣಿಕರು ತಾವು ಪಡೆಯುವ ಸೇವೆಗಳಿಗೆ ಹಣ ಪಾವತಿಸಲೇ ಬೇಕು ಎಂದಿರುವ ಕೇಂದ್ರ ವಿತ್ರ ಸಚಿವ ಅರುಣ್ ಜೇಟ್ಲಿ, ಆತಿಥ್ಯದಂತಹ ಅಪ್ರಧಾನ ಕೆಲಸಗಳನ್ನು ಹೊರ ಗುತ್ತಿಗೆ ನೀಡುವುದನ್ನು ಬಲವಾಗಿ ಬೆಂಬಲಿಸಿದ್ದಾರೆ. ಅವರು ಕೆಲವೇ ವಾರಗಳಲ್ಲಿ ಭಾರತದ ಪ್ರಥಮ ಸಾಮಾನ್ಯ ಹಾಗೂ ರೈಲ್ವೆ ಬಜೆಟ್ ಸಂಕಲನವನ್ನು ಮಂಡಿಸಲಿದ್ದಾರೆ.

ವರ್ಷ ವರ್ಷವೂ ರೈಲ್ವೆ ಬಜೆಟ್‌ನ ಯಶಸ್ಸನ್ನು ಬಳಕೆದಾರರಿಗೆ ನೀಡುವ ಸಬ್ಸಿಡಿಗಳು ಹಾಗೂ ರೈಲುಗಳ ಕುರಿತಾಗಿ ಮಾಡುವ ಜನಮರುಳು ಘೋಷಣೆಗಳ ಆಧಾರದಲ್ಲಿ ಅಳೆಯಲಾಗುತ್ತದೆ. ರೈಲ್ವೆಯು ಸಮರವೊಂದರಲ್ಲಿ ಸಿಲುಕಿದ್ದು, ಸಾಧನೆಗಿಂತಲೂ ಜನಮರುಳು ಘೋಷಣೆಗಳು ಮೇಲುಗೈ ಸಾಧಿಸಿವೆ. ಯಾವುದೇ ವಾಣಿಜ್ಯ ಸಂಸ್ಥೆ ನಡೆಯಲು ಅಗತ್ಯವಿರುವ ಮೂಲ ಸಿದ್ಧಾಂತಗಳು ಹಿಂದೆ ಬಿದ್ದಿವೆ. ಪ್ರಯಾಣಿಕರು ಪಡೆಯುವ ಸೇವೆಗಳಿಗೆ ಹಣ ಪಾವತಿಸಲೇ ಬೇಕೆಂಬುದು ಮೊದಲ ಅಗತ್ಯ ಸಿದ್ಧಾಂತವಾಗಿದೆಯೆಂದು ಅವರು ಹೇಳಿದ್ದಾರೆ.

ಸಿಐಐ ಸಂಘಟಿಸಿದ್ದ ರೈಲ್ವೆಯಲ್ಲಿ ಲೆಕ್ಕ ಸುಧಾರಣೆಯ ಕುರಿತಾದ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿದ್ದ ಜೇಟ್ಲಿ, ರೈಲ್ವೆಯು ತನ್ನ ಸಾಧನೆ ಹಾಗೂ ಆಂತರಿಕ ವ್ಯವಸ್ಥಾಪನ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳದಿದ್ದರೆ, ಅದು ಪ್ರಯಾಣಿಕರು ಹಾಗೂ ಸರಕು ಸಾರಿಗೆಯಲ್ಲಿ ಹೆದ್ದಾರಿಗಳು ಹಾಗೂ ವಿಮಾನಯಾನಗಳಂತಹ ವಲಯಗಳೊಂದಿಗಿನ ಸ್ಪರ್ಧೆಯಲ್ಲಿ ಸೋಲಲಿವೆ ಎಂದರು.

ರೈಲ್ವೆಯ ಪ್ರಧಾನ ಕೆಲಸ ರೈಲುಗಳನ್ನು ಓಡಿಸುವುದು ಹಾಗೂ ಆ ಸೇವೆಗಳನ್ನು ಒದಗಿಸುವುದಾಗಿದೆ. ಆತಿಥ್ಯವು ರೈಲ್ವೆಯ ಪ್ರಧಾನ ಕೆಲಸವಾಗಿರದು. ಆದುದರಿಂದ ಅವರ ಪ್ರಧಾನ ಕೆಲಸಗಳಲ್ಲದಿರುವುದನ್ನು ವಿಶ್ವಾದ್ಯಂತ ಒಪ್ಪಲಾಗಿರುವ ಹೊರ ಗುತ್ತಿಗೆ ಸಿದ್ದಾಂತದನ್ವಯ ರೈಲ್ವೆಯ ಚಟುವಟಿಕೆಗಳಿಗೆ ಸೇರಿಸುವುದು ತರ್ಕಬದ್ಧವಾಗಬಹುದೆಂದು ಜೇಟ್ಲಿ ಅಭಿಪ್ರಾಯಿಸಿದರು.

ಬಳಕೆದಾರರು ತಾವು ಪಡೆಯುವ ಸೇವೆಗಳಿಗೆ ಹಣ ಪಾವತಿಸಲಾರಂಭಿಸಿದ ಬಳಿಕವೇ ವಿದ್ಯುತ್ ಹಾಗೂ ಹೆದ್ದಾರಿ ವಲಯಗಳು ಉತ್ತಮ ನಿರ್ವಹಣೆಯನ್ನು ಆರಂಭಿಸಿದವೆಂದು ಉದಾಹರಿಸಿದ ಅವರು, ಬಳಕೆದಾರರು ತಾವು ಪಡೆದುದಕ್ಕೆ ಹಣ ಪಾವತಿಸಬೇಕೆಂಬ ಆರ್ಥಿಕ ಮಾದರಿಯನ್ನು ಅಳವಡಿಸಿಕೊಂಡ ಸೇವೆಗಳಷ್ಟೇ ವಿಶ್ವಾದ್ಯಂತ ಯಶಸ್ವಿಯಾಗಿವೆ ಎಂದರು.

ಆದರೆ, ನಾವು ಈ ಸಂಪೂರ್ಣ ಸಿದ್ಧಾಂತವನ್ನು, ಬಳಕೆದಾರರು ತಾವು ಪಡೆದ ಸೇವೆಗಳಿಗೆ ಹಣ ನೀಡಬೇಕಾಗಿಲ್ಲವೆಂಬ ಜನಮರುಳು ಅಗತ್ಯದ ಅಶಿಸ್ತನ್ನು ಸ್ವಯಂ ಹೇರಿಕೊಂಡು ಬುಡಮೇಲು ಮಾಡಿದ್ದೇವೆ. ಅದರಿಂದಾಗಿ ಯಾವುದೇ ಸಂಸ್ಥೆಯು ತನ್ನದೇ ಭಾರ ಹಾಗೂ ವಿರೋಧಾಭಾಸಗಳಿಂದ ತತ್ತರಿಸಲಾರಂಭಿಸುತ್ತದೆಂದು ಜೇಟ್ಲಿ ಹೇಳಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News